ರಾಜ್ಯಸಭೆಗೆ ಆಯ್ಕೆಯಾದ ಸುಧಾಮೂರ್ತಿ: ಪ್ರಧಾನಿ ಮೋದಿ ಅಭಿನಂದನೆ

Krishnaveni K

ಶುಕ್ರವಾರ, 8 ಮಾರ್ಚ್ 2024 (14:05 IST)
Photo Courtesy: Twitter
ನವದೆಹಲಿ: ಮಹಿಳಾ ದಿನಾಚರಣೆಯಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ ಫೋಸಿಸ್ ಸಹ ಸಂಸ್ಥಾಪಕಿ, ಸಮಾಜ ಸೇವಕಿ, ಬರಹಗಾರ್ತಿ ಸುಧಾಮೂರ್ತಿಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ.

ನಮ್ಮ ರಾಜ್ಯದ ಹೆಮ್ಮೆ ಸುಧಾಮೂರ್ತಿಯವರ ಆಯ್ಕೆಗೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ. ಸಮಾಜದ ಬಗೆಗೆ ಅವರ ಕಾಳಜಿ, ಸೇವೆ, ಸಾಧನೆ ಗಮನಿಸಿ ಈ ಗೌರವ ನೀಡಲಾಗುತ್ತಿದೆ.  ಅವರ ಹೆಸರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಣೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಗೆ ವಿಶೇಷ ಸಾಧನೆ ಮಾಡಿದವರನ್ನು ಆಯ್ಕೆ ಮಾಡುವ ಅವಕಾಶ ರಾಷ್ಟ್ರಪತಿಗಳಿದೆ. ಈ ಹಿಂದೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರನ್ನು ಇದೇ ರೀತಿ ರಾಜ್ಯಸಭೆಗೆ ಗೌರವಯುತವಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಸುಧಾಮೂರ್ತಿಯವರಿಗೆ ಸಂಸದರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ‘ಸುಧಾಮೂರ್ತಿಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವ ರಾಷ್ಟ್ರಪತಿಯವರ ಘೋಷಣೆ ನೋಡಿ ನನಗೆ ಅತೀವ ಸಂತಸವಾಗಿದೆ. ಸಮಾಜಸೇವೆ, ಬರವಣಿಗೆ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿ ನಮ್ಮ ನಾರಿ ಶಕ್ತಿ ಬಲಪಡಿಸುವ ಯೋಜನೆಗೆ ಪೂರಕವಾಗಿದೆ. ಸಂಸದರಾಗಿ ಅವರ ಅವಧಿ ಶುಭವಾಗಿರಲಿ ಎಂದು ಹಾರೈಸುತ್ತೇನೆ’ ಎಂದು ಮೋದಿ ಶುಭಾಶಯ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ