ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ: ಶೇ 50 ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ

Sampriya

ಸೋಮವಾರ, 18 ನವೆಂಬರ್ 2024 (14:12 IST)
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ.  ಸೋಮವಾರ ಎಕ್ಯೂಐ ಸೂಚ್ಯಂಕ 484 ದಾಖಲಾಗಿದೆ.

ಇದರ ಪರಿಣಾಮವಾಗಿ ಅರ್ಧದಷ್ಟು ಉದ್ಯೋಗಿಗಳು ಮಾತ್ರ ಕಚೇರಿಗೆ ತೆರಳಲು ಅವಕಾಶವಿದ್ದು, ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು, 10 ಮತ್ತು 12ನೇ ತರಗತಿ ಹೊರತುಪಡಿಸಿ ಎಲ್ಲಾ ಶಾಲೆಗಳನ್ನು ಬಂದ್‌ ಮಾಡಲಾಗಿದ್ದು, ಆನ್‌ಲೈನ್‌ ತರಗತಿ ನಡೆಸುವಂತೆ ಸೂಚಿಸಲಾಗಿದೆ.

ಬೆಳಿಗ್ಗೆ ದಟ್ಟವಾದ ವಿಷಕಾರಿ ಹೊಗೆಯು ನಗರವನ್ನು ಆವರಿಸಿದ್ದ ಪರಿಣಾಮ ಗೋಚರತೆಯ ಪ್ರಮಾಣ ಕಡಿಮೆಯಾಗಿದೆ.  ಈ ಮೂಲಕ ಗಾಳಿಯ ಗುಣಮಟ್ಟ ಈ ಋತುಮಾನದ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಭಾನುವಾರ ಸಂಜೆ 4 ಗಂಟೆಗೆ ಎಕ್ಯೂಐ ಪ್ರಮಾಣ 441 ರಷ್ಟಿತ್ತು, ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಸಂಜೆ 7 ಗಂಟೆ ಹೊತ್ತಿಗೆ 457ಕ್ಕೆ ಏರಿತ್ತು. ಈ ಹಿನ್ನೆಲೆಯಲ್ಲಿ 4ನೇ ಹಂತದ ನಿರ್ಬಂಧಗಳನ್ನು ವಿಧಿಸಲಾಗಿದೆ.

ಅದರಂತೆ ಅಗತ್ಯ ವಸ್ತುಗಳು ಮತ್ತು ಸಿಎನ್‌ಜಿಯಂತಹ ಶುದ್ಧ ಇಂಧನಗಳನ್ನು ಹೊತ್ತ ಟ್ರಕ್‌ ಹೊರತುಪಡಿಸಿ ಉಳಿದ ಟ್ರಕ್‌ಗಳ ಪ್ರವೇಶ ಹಾಗೂ ಲಘು ವಾಣಿಜ್ಯ ವಾಹನಗಳನ್ನೂ ನಿಷೇಧಿಸಲಾಗಿದೆ. ಜತೆಗೆ ಹೆದ್ದಾರಿ ರಸ್ತೆ, ಪೈಪ್‌ಲೈನ್‌ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ