ಬೆಳೆ ನಾಶ ಮಾಡಿದ ಸಚಿವರ ಬೆಂಗಾವಲು ಪಡೆ… ಸಿಕ್ಕ ಪರಿಹಾರವೇನು ಗೊತ್ತಾ…?
ಶುಕ್ರವಾರ, 27 ಅಕ್ಟೋಬರ್ 2017 (09:16 IST)
ಉತ್ತರ ಪ್ರದೇಶ: ರಾಜ್ಯದ ಸಚಿವರೊಬ್ಬರ ಬೆಂಗಾವಲು ಕಾರುಗಳು ರೈತನ ಬೆಳೆ ನಾಶ ಮಾಡಿವೆ. ನಷ್ಟ ಪರಿಹಾರವಾಗಿ ರೈತನಿಗೆ ಕೇವಲ ನಾಲ್ಕು ಸಾವಿರ ರೂ. ನೀಡಲಾಗಿದೆ.
ಜುಲೌನ್ ಜಿಲ್ಲೆಯ ಓರೈನಲ್ಲಿ ಅ.25ರಂದು ಗೋ ಶೆಡ್ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜಯ್ ಕುಮಾರ್ ಸಿಂಗ್ ಗೋವಿನ ಶೆಡ್ ನಿಮಾರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದರು. ಈ ವೇಳೆ ಗೋವಿನ ಶೆಡ್ ಪಕ್ಕದ ಹೊಲದ ಮೂಲಕ ತೆರಳಿದ ಸಚಿವರ ಬೆಂಗಾವಲು ಕಾರುಗಳು ಬೆಳೆದು ನಿಂತಿದ್ದ ಬೆಳೆಯನ್ನು ನಾಶ ಮಾಡಿವೆ ಎಂದು ಹೊಲದ ಮಾಲೀಕ, ರೈತ ಲಾಲ್ ಜೀ ಸೇಂಗರ್ ಆರೋಪಿಸಿದ್ದಾರೆ.
ರೈತ ಲಾಲ್ ಜೀ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಜಯ್ ಕುಮಾರ್, ಹೊಲದಲ್ಲಿ ಬೆಳೆ ಬಂದಿರಲಿಲ್ಲ. ಬೀಜಗಳು ಇನ್ನೂ ಮೊಳಕೆ ಒಡೆದಿರಲಿಲ್ಲ. ನಮ್ಮ 8-10 ಬೆಂಗಾವಲು ಕಾರುಗಳು ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ನಾಶಪಡಿಸಿವೆ ಎಂದು ರೈತ ಲಾಲ್ ಜೀ ಆರೋಪಿಸಿದ್ದಾರೆ. ಆದರೆ, ವಾಸ್ತವವಾಗಿ ಹೊಲದಲ್ಲಿ ಬೆಳೆಯೇ ಇರಲಿಲ್ಲ. ಆದರೂ ನಾನು ಮಾನವೀಯತೆ ದೃಷ್ಟಿಯಿಂದ ಇದರ ಹೊಣೆ ಹೊರುತ್ತೇನೆ. ಈಗಾಗಲೇ ಬೆಳೆ ನಾಶಕ್ಕೆ 4 ಸಾವಿರ ರೂ. ನಷ್ಟ ಪರಿಹಾರವನ್ನು ರೈತನಿಗೆ ಬಿಜೆಪಿ ಶಾಸಕ ನೀಡಿದ್ದಾರೆ ಎಂದು ಸಚಿವ ಜಯ್ ಕುಮಾರ್ ತಿಳಿಸಿದ್ದಾರೆ.