ಒಂದು ಕೆಜಿ ಈರುಳ್ಳಿಗೆ 5 ಪೈಸೆ?

ಬುಧವಾರ, 24 ಆಗಸ್ಟ್ 2016 (17:22 IST)
ಮಹಾರಾಷ್ಟ್ರದಲ್ಲಿ ಈರುಳ್ಳಿ ಸಗಟು ಮಾರಾಟ ಬೆಲೆ ನೆಲಕಚ್ಚಿದ್ದು, ಹರಾಜೊಂದರಲ್ಲಿ ರೈತನಿಗೆ ಒಂದು ಕೆ.ಜಿ ಈರುಳ್ಳಿಯನ್ನು ಐದು ಪೈಸೆಗೆ ಕೇಳಲಾಗಿದೆ. ಇದು ಸಗಟು ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ದಯನೀಯ ಸ್ಥಿತಿಯನ್ನು ಜಾಹೀರುಗೊಳಿಸಿದೆ.

ಈರುಳ್ಳಿಯ ಅತಿರಿಕ್ತ ಉತ್ಪಾದನೆಯಿಂದಾಗಿ ಕಳೆದ ಎರಡು ತಿಂಗಳಿಂದ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಮಂಗಳವಾರ ಹರಾಜಿನಲ್ಲಿ ಪಾಲ್ಗೊಂಡಿದ್ದ ನನಗೆ ಒಂದು ಕಿಲೋಗೆ ಐದು ಪೈಸೆಯನ್ನು ಆಫರ್ ಮಾಡಲಾಯಿತು ಎಂದು ನಿಪಾಡ್ ತಾಲ್ಲೂಕಿನ ಸೈಖೇಡಾದ ರೈತ ಸುಧಾಕರ್ ದಾರದೆ ಅಳಲು ತೋಡಿಕೊಂಡಿದ್ದಾರೆ. 
 
ತಾನು ಕಷ್ಟಪಟ್ಟು ಬೆಳೆದಿರುವ ಉತ್ಪನ್ನಕ್ಕೆ ಬೆಲೆಯೇ ಸಿಗದ ನೋವಿನಲ್ಲಿ ರೈತ ಸರಕಿನೊಂದಿಗೆ ಮನೆಗೆ ಹಿಂತಿರುಗಿದ್ದಾನೆ.
 
ಬರದ ಪರಿಣಾದಿಂದಾಗಿ ಆಗಸ್ಟ್ 21, 2015ರಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 5824ಕ್ಕೆ ಏರಿತ್ತು. ಆಗ ರೈತರು ಪ್ರತಿ ಕೆಜಿಗೆ 54 ರೂಪಾಯಿಯನ್ನು ಪಡೆದಿದ್ದರು. ಈರುಳ್ಳಿ ಬೆಲೆ ಈ ಮಟ್ಟದಲ್ಲಿ ಏರಿದ್ದನ್ನು ಕಂಡ ರೈತರು ಈ ಬಾರಿ ಬೆಳೆಯಲು ಇದೇ ಬೆಳೆಯನ್ನು ಆಯ್ದುಕೊಂಡರು. 
 
ಇನ್ನೊಂದು ಕಾರಣವೇನೆಂದರೆ ಬರದ ಕಾರಣಕ್ಕೆ ಹಲವಾರು ರೈತರು ಕಬ್ಬಿನ ಬದಲಾಗಿ ಈರುಳ್ಳಿಯನ್ನೇ ಆಯ್ದುಕೊಂಡರು. ಆದರೆ ಈಗ ಅತಿರಿಕ್ತ ಉತ್ಪಾದನೆಯಿಂದಾಗಿ ಬೆಲೆಯೇ ಇಲ್ಲದಂತಾಗಿದೆ ಎಂದು ಪುಣೆ ಮೂಲದ ಕೃಷಿ ವಿಶ್ಲೇಷಕರಾದ ದೀಪಕ್ ಚವನ್ ಹೇಳುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ