ಕರ್ನಾಟಕ ಕಾಂಗ್ರೆಸ್ ತೆರಿಗೆ ಹೋರಾಟದ ಬಗ್ಗೆ ಪ್ರಧಾನಿ ಮೋದಿ ಟಾಂಗ್

Krishnaveni K

ಬುಧವಾರ, 7 ಫೆಬ್ರವರಿ 2024 (16:55 IST)
ನವದೆಹಲಿ: ತೆರಿಗೆ ತಾರತಮ್ಯ ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸಿದ ಕರ್ನಾಟಕ ಕಾಂಗ್ರೆಸ್ ನಾಯಕರ ಬಗ್ಗೆ ಪ್ರಧಾನಿ ಮೋದಿ ಇಂದು ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಟಾಂಗ್ ಕೊಟ್ಟಿದ್ದಾರೆ.

ರಾಜ್ಯಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಮೋದಿ ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಗೆ ಯಾವತ್ತೂ ದೇಶ ಒಡೆದೇ ಅಭ್ಯಾಸ. ಹೀಗಾಗಿಯೇ ಈಗ ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ದೆಹಲಿಯಲ್ಲಿ ಇಂದು ನಡೆದ ಪ್ರತಿಭಟನೆಗೆ ಟಾಂಗ್ ಕೊಟ್ಟರು.

ನೆಹರೂ ಮೀಸಲಾತಿ ವಿರೋಧಿಯಾಗಿದ್ದು: ಮೋದಿ
ಮತ್ತೊಮ್ಮೆ ಸಂಸತ್ತಿನಲ್ಲಿ ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ನೆಹರೂ ಮೀಸಲಾತಿಯ ವಿರೋಧಿಯಾಗಿದ್ದರು. ಅವರು ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿ ಇರಬಾರದು ಎಂದಿದ್ದರು. ಇದೀಗ ಅದೇ ಕಾಂಗ್ರೆಸ್ ಮೀಸಲಾತಿ ಬೇಕು ಎಂದು ಬೊಬ್ಬಿರಿಯುತ್ತಿದೆ.  ಬಹುಶಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇರದೇ ಹೋಗಿದ್ದರೆ ಅಂದು ಎಸ್ ಸಿ, ಎಸ್ ಟಿ ವರ್ಗದವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ.

ಇನ್ನೂ ಗುಲಾಮ ಮನಸ್ಥಿತಿಯಲ್ಲೇ ಇದ್ದೀರಿ
ಹಿಂದೆಲ್ಲಾ ಬಜೆಟ್ ಸಂಜೆ ವೇಳೆ ಘೋಷಣೆ ಮಾಡಲಾಗುತ್ತಿತ್ತು. ಯಾಕೆಂದರೆ ಇಂಗ್ಲೆಂಡ್ ಸಮಯಕ್ಕೆ ಹೊಂದಿಕೆಯಾಗಲು ಈ ರೀತಿ ಮಾಡಲಾಗುತ್ತಿತ್ತು. ನೀವು ಆಂಗ್ಲರ ಗುಲಾಮರಾಗಿಲ್ಲ ಎಂದಾದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಂಗ್ಲರ ಆಡಳಿತದ ಕುರುಹುಗಳು ಯಾಕಿವೆ? ಯಾಕೆ ನಮ್ಮ ಹುತಾತ್ಮ ಸೈನಿಕರ ಸ್ಮಾರಕವಿಲ್ಲ?

ಇಷ್ಟು ದೊಡ್ಡ ಪಾರ್ಟಿ ಕಾಂಗ್ರೆಸ್. ದಶಕಗಳ ಕಾಲ ಆಡಳಿತ ನಡೆಸಿಯೂ ಇಂದು ಈ ಮಟ್ಟಕ್ಕೆ ಇಳಿದಿದೆ ಎಂದಾದರೆ ಅದರ ಪರಿಸ್ಥಿತಿಗೆ ನಾನು ದುಃಖಪಡುತ್ತೇನೆ.  ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿತ್ತು. ಧ್ವನಿ ಹತ್ತಿಕ್ಕುವ ಕೆಲಸ ಮಾಡಿತು.  ಈ ದೇಶವನ್ನು ದಕ್ಷಿಣ ಉತ್ತರ ಎಂದು ಒಡೆಯುವ ಕೆಲಸ ಮಾಡಿತು. ಈಗ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಬಗ್ಗೆ ಬೋಧನೆ ಮಾಡುತ್ತಿದೆ ಎಂದು ಪ್ರಧಾನಿ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ