ಖರ್ಗೆ ಕಮಾಂಡರ್ ಗಳಿಲ್ಲದ ಹಕ್ಕಿಯಾಗಿದ್ದರು ಎಂದು ಜೋಕ್ ಮಾಡಿದ ಪ್ರಧಾನಿ ಮೋದಿ

Krishnaveni K

ಬುಧವಾರ, 7 ಫೆಬ್ರವರಿ 2024 (15:42 IST)
ನವದೆಹಲಿ: ರಾಜ್ಯಸಭೆಯಲ್ಲಿ ಇಂದು ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಮೊನ್ನೆಯಷ್ಟೇ ಮಲ್ಲಿಕಾರ್ಜುನ ಖರ್ಗೆ ಮಾಡಿದ ಭಾಷಣದ ಬಗ್ಗೆ ಲೇವಡಿ ಮಾಡಿದ್ದಾರೆ.

ರಾಜ್ಯಸಭೆಯಲ್ಲಿ ಮೊನ್ನೆಯಷ್ಟೇ ಭಾಷಣ ಮಾಡುವಾಗ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಎಡವಟ್ಟು ಮಾಡಿಕೊಂಡಿದ್ದರು. ಅವರ ಮಾತು ಕೇಳಿ ಪ್ರಧಾನಿ ಸೇರಿದಂತೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ನಗೆಗಡಲಲ್ಲಿ ತೇಲಿದ್ದರು.

ಇಂದು ಮಲ್ಲಿಕಾರ್ಜುನ ಖರ್ಗೆ ಭಾಷಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದಾರೆ. ಬಹಳ ದಿನಗಳ ನಂತರ ಲೋಕಸಭೆಯಲ್ಲಿ ತಮಾಷೆ ಕೇಳಿದೆ. ಖರ್ಗೆ ಜೀಯವರ ಭಾಷಣವನ್ನು ನಾನು ಬಹಳ ಎಂಜಾಯ್ ಮಾಡಿದೆ ಎಂದು ಲೇವಡಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ‘ಖರ್ಗೆ ಜೀ ಭಾಷಣ ಕೇಳಿ ತುಂಬಾ ದಿನವಾಗಿತ್ತು. ಅದು ಹೇಗೆ ಮೊನ್ನೆ ಅವರು ಮಾತನಾಡಿದರು ಎಂದು ಅಚ್ಚರಿಯಾಯಿತು. ಯಾಕೆಂದರೆ ಅವರು ಮೊನ್ನೆ ಕಮಾಂಡರ್ ಗಳಿಲ್ಲದ ಸ್ವತಂತ್ರ ಹಕ್ಕಿಯಾಗಿದ್ದರು’ ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಇದಲ್ಲದೆ ಖರ್ಗೆಯವರ 400 ಸೀಟು ಎಡವಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದು, ಖರ್ಗೆ ಸಾಹೇಬರು ನಮಗೆ 400 ಸೀಟು ಸಿಗಲಿ ಎಂದು ಆಶೀರ್ವದಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಬಾರಿ 40 ಸೀಟು ಗೆಲ್ಲಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ