ಪುಟ್ಟ ಬಾಲಕಿ ಜತೆ ಬಿಜೆಪಿ ರಾಜ್ಯಾಧ್ಯಕ್ಷರ ಪುತ್ರನ ವಿವಾಹ

ಶುಕ್ರವಾರ, 1 ಜುಲೈ 2016 (16:18 IST)
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ ಜಾರ್ಖಂಡ್ ಬಿಜೆಪಿ ಅಧ್ಯಕ್ಷ ತಾಲಾ ಮರಾಂಡಿ ಪುತ್ರ ಮುನ್ನಾ ಮರಾಂಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 

 
ಮುನ್ನಾ ಮರಾಂಡಿ ಮಂಗಳವಾರ 11 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. 
 
ಬುಧವಾರ ಆಯೋಜಿಸಲಾಗಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಘುಬರ ದಾಸ್ ಕೂಡ ಭಾಗವಹಿಸಬೇಕಿತ್ತು. ಆದರೆ ವಿವಾದಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಅವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. 
 
ಮುನ್ನಾ ವಿವಾಹವಾಗಿರುವ ಬಾಲಕಿಯು 6ನೇ ತರಗತಿ ಓದುತ್ತಿದ್ದಳೆಂದು ಮಾಧ್ಯಮಗಳು ವರದಿ ಮಾಡಿವೆ. 
 
ಮುನ್ನಾ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷ ಕಾಲ ಲೈಂಗಿಕ ಕಿರುಕುಳ ನೀಡಿದ್ದ ಎಂದು ಬಾಲಕಿಯೊಬ್ಬಳು ದೂರು ನೀಡಿರುವ ಒಂದು ವಾರದ ಬಳಿಕ ಮತ್ತೊಂದು ಪ್ರಕರಣದಲ್ಲಾತ ಸಿಲುಕಿಕೊಂಡಿದ್ದಾನೆ. 
 
ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ತನ್ನನ್ನು ದೂರ ಮಾಡಿದ್ದಾನೆ ಎಂದು 16 ವರ್ಷದ ಬಾಲಕಿಯೋರ್ವಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಪ್ರಕರಣವೀಗ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿದೆ. 
 
ತನ್ನ ಜತೆ ಗೆಳೆತನ ಬೆಳೆಸಿಕೊಂಡ ಮುನ್ನಾ ಮೊಬೈಲ್ ಕೊಡಿಸಿ ಹತ್ತಿರವಾಗಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ಬಳಸಿಕೊಂಡಿದ್ದ . ಮುನ್ನಾ ಮತ್ತೊಂದು ಮದುವೆಯಾಗುವ ಯೋಜನೆ ರೂಪಿಸಿದ್ದಾನೆ ಎಂಬುದು ತಿಳಿದ ಮೇಲೆಯೇ ನಾನು ದೂರು ನೀಡಿದ್ದಾಗಿ ಆಕೆ ಹೇಳಿದ್ದಳು.
 
ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿದ್ದು, ಯಾವೊಬ್ಬ ನಾಯಕರು ಕೂಡ ರಾಜ್ಯಾಧ್ಯಕ್ಷನ ಸಮರ್ಥನೆಗೆ ನಿಂತಿಲ್ಲ. 
 
ಸಂಪೂರ್ಣ ಘಟನಾವಳಿಗಳ ತನಿಖೆ ನಡೆಯಬೇಕೆಂದು ವಿರೋಧ ಪಕ್ಷದವರು ಆಗ್ರಹಿಸುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ