ಗಂಡಂದಿರಿಗೆ ಹೊಡೆಯಲು ನವ ವಧುವಿಗೆ ಮರದ ಬ್ಯಾಟ್ ಉಡುಗೊರೆ ಕೊಟ್ಟ ಸಚಿವ!

ಸೋಮವಾರ, 1 ಮೇ 2017 (08:36 IST)
ನವದೆಹಲಿ: ನಮ್ಮ ದೇಶದ ರಾಜಕಾರಣಿಗಳು ಎಗ್ಗಿಲ್ಲದೆ ಏನೇನೋ ಮಾತನಾಡಿ, ನಗೆಪಾಟಲಿಗೀಡಾಗುತ್ತಾರೆ. ಇನ್ನು ಕೆಲವೊಮ್ಮೆ ವೃಥಾ ವಿವಾದ ಸೃಷ್ಟಿಸುತ್ತಾರೆ. ಅಂತಹ ಕೆಲಸವನ್ನು ಮಧ್ಯಪ್ರದೇಶದ ಸಚಿವರೊಬ್ಬರು ಮಾಡಿದ್ದಾರೆ.

 
ಮಧ್ಯಪ್ರದೇಶದ ಪಂಚಾಯತ್ ರಾಜ್ ಸಚಿವ ಗೋಪಾಲ್ ಭಾರ್ಗವ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೊಸದಾಗಿ ವಿವಾಹ ಜೀವನಕ್ಕೆ ಕಾಲಿಟ್ಟ ವಧುವಿಗೆ ಅವರು ಖತರ್ನಾಕ್ ಐಡಿಯಾ ಕೊಟ್ಟಿದ್ದಾರೆ.

ಒಂದು ವೇಳೆ ನಿಮ್ಮ ಪತಿ ಕಿರುಕುಳ ನೀಡಿದರೆ, ಕುಡಿದು ಬಂದರೆ ಮರದ ಕೋಲು ತೆಗೆದು ಚೆನ್ನಾಗಿ ಏಟು ಕೊಡಿ ಎಂದು ಸಚಿವರು ಸಲಹೆ ಕೊಟ್ಟಿದ್ದಾರೆ.  ಅಲ್ಲದೆ ನೂತನ ವಧುವಿಗೆ ಮರದ ಬ್ಯಾಟ್ ಉಡುಗೊರೆ ನೀಡಿದ್ದಾರೆ. ಆ ಮೂಲಕ ಕುಡುಕ ಗಂಡಂದಿರಿಗೆ ಹೊಡೆಯಲು ಆಯುಧವನ್ನೂ ಅವರೇ ಗಿಫ್ಟ್ ಮಾಡಿದ್ದಾರೆ. ಇಂತಹದ್ದೊಂದು ಐಡಿಯಾ ಕೊಡುವುದಕ್ಕೆ ಕಾರಣ ಅವರ ಕ್ಷೇತ್ರದ ಮಹಿಳೆಯರು ಅವರಿಗೆ ಕೊಡುತ್ತಿದ್ದ ದೂರಂತೆ.

ಸದಾ ಮಹಿಳೆಯರು ತಮ್ಮ ಗಂಡ ಕುಡಿದು ಬಂದು ತಾನು ದುಡಿದ ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಾನೆ ಎಂದು ದೂರು ಕೇಳಿ ಕೇಳಿ ಸಾಕಾಯಿತು. ಹೀಗಾಗಿ ಗಂಡ ಕಿರುಕುಳ ನೀಡಿದರೆ ನೀವೂ ಒಂದೆರಡು ಏಟು ಕೊಡಿ. ಪೊಲೀಸರೂ ನಿಮ್ಮನ್ನು ತಡೆಯಲ್ಲ ಎಂದು ಅಮೂಲ್ಯ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ