ಹಿಂಸಾಚಾರದ ಹೊಣೆ ಹೊತ್ತು ಸಿಎಂ ಖಟ್ಟರ್ ರಾಜೀನಾಮೆ ನೀಡಲಿ: ವಾದ್ರಾ

ಭಾನುವಾರ, 27 ಆಗಸ್ಟ್ 2017 (15:19 IST)
ದೇರಾ ಸಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಅವರ ಶಿಕ್ಷೆ ಪ್ರಕಟಿಸಿದ ನಂತರ ನಡೆದ ಹಿಂಸಾಚಾರದ ಜವಾಬ್ದಾರಿಯನ್ನು ಹೊತ್ತುಕೊಂಡು ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಆಗ್ರಹಿಸಿದ್ದಾರೆ.
"ಪಂಚಕುಲ ನಗರದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹತ್ಯೆಗೀಡಾದವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವಿದೆ. ಹರಿಯಾಣದ ಮುಖ್ಯಮಂತ್ರಿ ಖಟ್ಟರ್, ನೀವು ಭದ್ರತೆಯ ವೈಫಲ್ಯ ಕುರಿತ ಜವಾಬ್ದಾರಿಯನ್ನು ತೆಗೆದುಕೊಂಡು ರಾಜೀನಾಮೆ ನೀಡಬೇಕೆಂದು ರಾಷ್ಟ್ರ ಬಯಸಿದೆ" ಎಂದು ವಾದ್ರಾ ಟ್ವೀಟ್ ಮಾಡಿದ್ದಾರೆ.
 
ದೇರಾ ಮುಖ್ಯಸ್ಥನ ಆಸ್ತಿಯನ್ನು ಹರಾಜು ಮಾಡುವ ಮೂಲಕ ಹಿಂಸಾಚಾರದ ನಷ್ಟವನ್ನು ಸರಿದೂಗಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ಆದೇಶವನ್ನು ಶ್ಲಾಘಿಸಿದ್ದಾರೆ.
 
ಹರಿಯಾಣದಲ್ಲಿರುವ ಬಿಜೆಪಿ ಸರಕಾರ ಅನಗತ್ಯವಾಗಿ ನನಗೆ ಕಿರುಕುಳ ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ ಹತ್ಯಾಕಾಂಡದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ತಿರುಗೇಟು ನೀಡಿದ್ದಾರೆ.
 
ಪರಿಸ್ಥಿತಿ ಉಲ್ಬಣಗೊಳ್ಳಲು ಅವಕಾಶ ನೀಡಿರುವ ಖಟ್ಟಾರ್ ಸರಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಹಾಕಿದ ಛೀಮಾರಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ