ಉತ್ತರಾಖಂಡ: ಉತ್ತರಕಾಶಿಯಲ್ಲಿ ಮೇಘಸ್ಪೋಟದಿಂದಾಗಿ ಪ್ರಳಯ ಸದೃಶ ವಾತಾವರಣ ಉಂಟಾಗಿದೆ. ಮೇಘಸ್ಪೋಟದಲ್ಲಿ 4 ಜನ ಸಾವನ್ನಪ್ಪಿದ್ದು ಖಚಿತವಾಗಿದೆ. 80 ಮಂದಿ ನಾಪತ್ತೆಯಾಗಿದ್ದಾರೆ.
ಧರಾಲಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಮೇಘಸ್ಪೋಟದಲ್ಲಿ ಸಾಕಷ್ಟು ಹಾನಿಗಳಾಗಿವೆ. ಹಲವು ಮನೆಗಳು ನೋಡ ನೋಡುತ್ತಿದ್ದಂತೇ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇತ್ತೀಚೆಗಿನ ಮಾಹಿತಿ ಪ್ರಕಾರ 80 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಕೆಸರು ಸಹಿತ ಪ್ರವಾಹದಿಂದಾಗಿ ಇಡೀ ಗ್ರಾಮವೇ ಮುಳುಗಿ ಹೋಗಿದೆ. ಗ್ರಾಮದ ಕಟ್ಟಡಗಳ ಸೂರಿನವರೆಗೂ ಕೆಸರು ಸಹಿತ ನೀರು ತುಂಬಿ ನಿಂತಿದೆ. ಈ ಪ್ರವಾಹದಲ್ಲಿ ಸಿಲುಕಿದ ಗ್ರಾಮಸ್ಥರನ್ನು ರಕ್ಷಿಸಲು ಭಾರತೀಯ ಸೇನೆ, ಎನ್ ಡಿಆರ್ ಎಫ್ ಸಿಬ್ಬಂದಿ, ಐಟಿಬಿಪಿ, ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಪ್ರವಾಹದಿಂದಾಗಿ ರಕ್ಷಣಾ ಸಿಬ್ಬಂದಿಗೂ ಪರಿಹಾರ ಕಾರ್ಯ ಮಾಡಲು ತೊಂದರೆಯಾಗುತ್ತಿದೆ. ಭೂ ಕುಸಿತದಿಂದಾಗಿ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಪ್ರವಾಹ ಸ್ಥಳಕ್ಕೆ ತಲುಪಲು ರಕ್ಷಣಾ ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಹಾರಾಟಕ್ಕೂ ಸಮಸ್ಯೆಯಾಗಿದೆ. ಹೀಗಾಗಿ ಭಾರತೀಯ ಸೇನೆ ರಂಗಕ್ಕಿಳಿದಿದ್ದು ಈಗಾಗಲೇ 37 ಗ್ರಾಮಸ್ಥರನ್ನು ರಕ್ಷಿಸಲಾಗಿದೆ.