ಎಕ್ಸಿಟ್ ಪೋಲ್ ಎಷ್ಟು ಸತ್ಯ: 2014, 2019 ರಲ್ಲಿ ಎಕ್ಸಿಟ್ ಪೋಲ್ ಎಷ್ಟು ನಿಜವಾಗಿತ್ತು

Krishnaveni K

ಸೋಮವಾರ, 3 ಜೂನ್ 2024 (08:24 IST)
ನವದೆಹಲಿ: ಲೋಕಸಭೆ ಚುನಾವಣೆ 2024 ರ ಎಕ್ಸಿಟ್ ಪೋಲ್ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು ಬಹುತೇಕ ಸಮೀಕ್ಷೆಗಳು ಎನ್ ಡಿಎ ಮತ್ತೆ ಅಧಿಕಾರಕ್ಕೇರಲಿದೆ ಎನ್ನುತ್ತಿವೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶ ಎಷ್ಟು ನಿಜವಾಗುತ್ತದೆ? ಈ ಹಿಂದೆ 2014 ಮತ್ತು 2019 ರಲ್ಲಿ ಎಕ್ಸಿಟ್ ಪೋಲ್ ಏನು ಹೇಳಿತ್ತು ಇಲ್ಲಿದೆ ವಿವರ.

2014 ರಲ್ಲಿ ಆಗಷ್ಟೇ ದೇಶದಾದ್ಯಂತ ಮೋದಿ ಅಲೆ ಶುರುವಾಗಿತ್ತು. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತ್ತು. ಅದರಂತೆ ಆ ಚುನಾವಣೆಯಲ್ಲಿ ಎನ್ ಡಿಎ ಕೂಟವೇ ಬಹುಮತ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು. ಎನ್ ಡಿಎ ಕೂಟ 300 ಪ್ಲಸ್ ಸ್ಥಾನ ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆ ನುಡಿದಿತ್ತು. ಅದರಂತೆ ಆ ಚುನಾವಣೆಯಲ್ಲಿ ಎನ್ ಡಿಎ ಕೂಟ 282 ಸ್ಥಾನ ಗೆದ್ದುಕೊಂಡು ಬಹುಮತ ಪಡೆದಿತ್ತು.

2019 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಇದಕ್ಕಿಂತ ಮೊದಲು ಅಟಲ್ ಬಿಹಾರಿ ವಾಜಪೇಯಿಗೆ ಆದಂತೆ ಮೋದಿಗೂ ಎರಡನೇ ಅವಧಿಗೆ ಸೋಲಾಗಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ವಿಶೇಷವೆಂದರೆ ಆ ಬಾರಿ ಎಕ್ಸಿಟ್ ಪೋಲ್ ನಲ್ಲಿ ಎನ್ ಡಿಎ ಕೂಟಕ್ಕೆ 300 ರ ಆಸುಪಾಸು ಸೀಟು ಬರಬಹುದು, ಸರಳ ಬಹುಮತ ಬರಬಹುದು ಎಂದು ಫಲಿತಾಂಶ ಬಂದಿತ್ತು.

ಆದರೆ 2019 ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 300 ಪ್ಲಸ್ ಸ್ಥಾನ ಗೆದ್ದುಕೊಂಡು ಪ್ರಚಂಡ ಬಹುಮತ ಸಾಧಿಸಿತ್ತು. ಈ ಎರಡೂ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಕೆಲವೇ ಸ್ಥಾನಗಳು ಹೆಚ್ಚು ಕಡಿಮೆಯಾಗಿತ್ತಷ್ಟೇ. ಆದರೆ ಎರಡೂ ಬಾರಿಯೂ ಎನ್ ಡಿಎ ಬಹುತಮ ಸಾಧಿಸುತ್ತದೆ ಎಂದಿದ್ದು ನಿಜವಾಗಿತ್ತು.

ಇದೀಗ 2024 ಲೋಕಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದಾರೆ ಎಂದು ಸೂಚಿಸುತ್ತಿದೆ. ಪ್ರತೀ ಬಾರಿಯೂ ಎಕ್ಸಿಟ್ ಪೋಲ್ ಕರಾರುವಾಕ್ ಆಗಿ ಇಷ್ಟೇ ಸ್ಥಾನ ಗೆಲ್ಲಬಹುದು ಎಂದು ಹೇಳದು. ಆದರೆ ಎಕ್ಸಿಟ್ ಪೋಲ್ ನಲ್ಲಿ ಬಂದ ಫಲಿತಾಂಶ ಕೆಲವೊಮ್ಮೆ ಉಲ್ಟಾ ಹೊಡೆದಿದ್ದೂ ಇದೆ. ಆದರೆ ಬಹುತೇಕ ಸಂದರ್ಭದಲ್ಲಿ ಕೆಲವೇ ಸ್ಥಾನ ಹೆಚ್ಚು-ಕಮ್ಮಿಯಾಗುತ್ತದಷ್ಟೇ. ಹೀಗಾಗಿ ನಾಳೆ ಬರಲಿರುವ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ