ಗಂಡ-ಹೆಂಡತಿ ಮನೆ ಜವಾಬ್ದಾರಿಯನ್ನು ಸಮಾನವಾಗಿ ಹೊರಬೇಕು: ಬಾಂಬೆ ಹೈಕೋರ್ಟ್
ಶುಕ್ರವಾರ, 15 ಸೆಪ್ಟಂಬರ್ 2023 (10:18 IST)
ಮುಂಬೈ : ಆಧುನಿಕ ಸಮಾಜದಲ್ಲಿ ಗಂಡ-ಹೆಂಡತಿ ಇಬ್ಬರೂ ಮನೆಯ ಜವಾಬ್ದಾರಿಯನ್ನ ಸಮಾನವಾಗಿ ಹೊರಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಸೆಪ್ಟೆಂಬರ್ 6 ರಂದು ತನ್ನ 13 ವರ್ಷದ ವಿವಾಹವನ್ನು ವಿಸರ್ಜಿಸುವಂತೆ ಕೋರಿ (ವಿಚ್ಛೇದನ ಕೋರಿ) 35 ವರ್ಷದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನ ವಜಾಗೊಳಿಸಿದೆ. 2018ರ ಮಾರ್ಚ್ ತಿಂಗಳಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
2010ರಲ್ಲಿ ದಂಪತಿ ವಿವಾಹವಾಗಿದ್ದರು, ತನ್ನ ಹೆಂಡತಿ ಯಾವಾಗಲೂ ತನ್ನ ತಾಯಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ ಇರ್ತಾಳೆ, ಮನೆಕೆಲಸವನ್ನೇ ಮಾಡೋದಿಲ್ಲ ಎಂದು ಅರ್ಜಿದಾರ ಪತಿ ಮನವಿಯಲ್ಲಿ ವಾದಿಸಿದ್ದ.
ಆದ್ರೆ ಮಹಿಳೆ ನಾನು ಕಚೇರಿಯಿಂದ ಬರುತ್ತಿದ್ದಂತೆ ಮನೆಯ ಎಲ್ಲಾ ಕೆಲಸಗಳನ್ನ ಮಾಡಲು ಪತಿ ಒತ್ತಾಯಿಸುತ್ತಿದ್ದ, ಈ ಬಗ್ಗೆ ನನ್ನ ಕುಟುಂಬಸ್ಥರಿಗೆ ಹೇಳಿದಾಗ ಅವರಿಂದಲೂ ನಿಂಧನೆ ಎದುರಿಸಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಲ್ಲದೇ ವಿಚ್ಛೇದಿತ ಪತಿ ತನಗೆ ಹಲವು ಬಾರಿ ದೈಹಿಕ ಕಿರುಕುಳವನ್ನೂ ನೀಡಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.
ವಾದ-ಪ್ರತಿವಾದವನ್ನು ಆಲಿಸಿದ ಪೀಠವು, ಮಹಿಳೆ ಮತ್ತು ಪುರುಷ ಇಬ್ಬರು ಉದ್ಯೋಗದಲ್ಲಿದ್ದಾರೆ, ಆದ್ದರಿಂದ ಮನೆಯ ಎಲ್ಲಾ ಕೆಲಸಗಳನ್ನು ಹೆಂಡತಿಯೇ ಮಾಡಬೇಕೆಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಇದು ಪುರುಷನ ಹಿಂಜರಿಕೆ ಮನೋಭಾವವನ್ನೂ ಸೂಚಿಸುತ್ತದೆ.