'ಆರ್ ಎಸ್ ಎಸ್ ಜೊತೆ ನನಗೆ ಸಂಬಂಧವಿಲ್ಲ': ಹೆಚ್ ಡಿ ದೇವೇಗೌಡ

ಶನಿವಾರ, 9 ಅಕ್ಟೋಬರ್ 2021 (13:33 IST)
ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ಪ್ರತಿಪಾದಿಸಿದಂತೆ ತಮಗೆ ಆರ್ ಎಸ್ ಎಸ್ ಜೊತೆ ಯಾವುದೇ ಸಂಬಂಧವಿಲ್ಲ. ಈ ಹಿಂದೆ ತಾವು ಆರ್ ಎಸ್ ಎಸ್ ನ್ನು ಹೊಗಳಿದ್ದು ಕೂಡ ಇಲ್ಲ ಎಂದು ಹೇಳಿದ್ದಾರೆ.

ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿರುವ ಸಿ ಟಿ ರವಿ ವಿರುದ್ಧ ಹೆಚ್ ಡಿ ದೇವೇಗೌಡ ಕಿಡಿಕಾರಿದ್ದಾರೆ. ನಿನ್ನೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಟ್ವೀಟ್ ಮೂಲಕ ಸಿ ಟಿ ರವಿಯವರು ಹೆಚ್ ಡಿ ದೇವೇಗೌಡರು ಆರ್ ಎಸ್ ಎಸ್ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದರು. ಆರ್ ಎಸ್ ಎಸ್ ಬಗ್ಗೆ ತುಚ್ಛವಾಗಿ ಮಾತನಾಡುವ ಬದಲು ಅವರ ಮಗ ಹೆಚ್ ಡಿ ಕುಮಾರಸ್ವಾಮಿಯವರು ತಂದೆಯಿಂದ ಕಲಿಯಬೇಕು ಎಂದಿದ್ದರು. ಆರ್ ಎಸ್ ಎಸ್ ಈ ದೇಶದಲ್ಲಿ ರಹಸ್ಯ ಅಜೆಂಡಾವನ್ನು ಇಟ್ಟುಕೊಂಡು ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು ಆಡಳಿತ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ''ಸುಳ್ಳು ಹೇಳುವುದಕ್ಕೆ ಮಿತಿಯಿರಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು ಬಿಟ್ಟರೆ ನನಗೂ ಆರ್ ಎಸ್ ಎಸ್ ಗೂ ಯಾವುದೇ ಸಂಬಂಧವಿಲ್ಲ. ಬ್ಯಾಂಕ್ವೆಟ್ ಹಾಲ್ ನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ನಾನು ಆಗ ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ತನ್ನ ರಚನಾತ್ಮಕ ವರ್ಷಗಳಲ್ಲಿ ಮಾಡಿದ ಕೆಲಸವನ್ನು ಎಲ್ಲರೂ ಮೆಚ್ಚಿದ್ದಾರೆ, ಆದರೆ ಇಂದು ಅದರ ಕೆಲಸ-ಕಾರ್ಯಗಳು ಭಿನ್ನವಾಗಿದೆ. "ಹೆಡ್ಗೆವಾರ್ (ಆರ್ಎಸ್ಎಸ್ನ ಸರಸಂಚಾಲಕ ಸ್ಥಾಪಕ) ಸಂಘ ಅಥವಾ ಅಂದಿನ ಆರ್ಎಸ್ಎಸ್ ಮಾಡಿದ ಕೆಲಸವು ಇಂದು ಮಾಡುತ್ತಿರುವ ಕೆಲಸಕ್ಕಿಂತ ಭಿನ್ನವಾಗಿತ್ತು. ಇಂದು ಮತ್ತು ಅಂದಿನ ಆರ್ ಎಸ್ ಎಸ್ ಗೂ ಯಾವುದೇ ಸಂಬಂಧವಿಲ್ಲ" ಎಂದು ದೇವೇಗೌಡರು ಹೇಳಿದರು.
ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಮುಸ್ಲಿಮರನ್ನು ಕಣಕ್ಕಿಳಿಸುವ ತನ್ನ ಪಕ್ಷದ ನಿರ್ಧಾರವನ್ನು ಗೌಡರು ಸಮರ್ಥಿಸಿಕೊಂಡರು, ಕಾಂಗ್ರೆಸ್ ತನ್ನ ಸಂಭಾವ್ಯ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಇದು ತಮಗೆ ಅನಿವಾರ್ಯವಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ