ನಿದ್ದೆಗಣ್ಣಿನ ಸರ್ಕಾರ ಬಡಿದೆಬ್ಬಿಸುವೆ: ಡಿ.ಕೆ. ಶಿವಕುಮಾರ

ಶನಿವಾರ, 9 ಅಕ್ಟೋಬರ್ 2021 (10:56 IST)
ಜೇವರ್ಗಿ : ಅತಿವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿದ್ದೆಗಣ್ಣಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಸಿಂದಗಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ಶುಕ್ರವಾರ ರೇವನೂರ ಕ್ರಾಸ್ ಬಳಿ ಇರುವ ಹೆಲಿಪ್ಯಾಡ್ನಲ್ಲಿ ಬಂದಿಳಿದ ಅವರು, ರೈತ ಮಹಿಳೆಯರಿದ್ದ ಸ್ಥಳಕ್ಕೆ ಆಗಮಿಸಿ ಸಂಕಷ್ಟ ಆಲಿಸಿ, ಮಾತನಾಡಿದರು.
ರಾಜ್ಯದ ಅನೇಕ ಕಡೆಗಳಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಆದರೂ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಈ ವೇಳೆ ರೈತ ಮಹಿಳೆಯರು, ಕಳೆದ ವರ್ಷವೂ ಅತಿವೃಷ್ಟಿ, ಭೀಮಾ ನದಿ ಪ್ರವಾಹದಿಂದ ತೀವ್ರ ತೊಂದರೆ ಅನುಭವಿಸಿದ್ದೇವೆ. ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದು ಅಳಲು ತೋಡಿಕೊಂಡರು.
ಪ್ರಸಕ್ತ ಸಾಲಿನಲ್ಲಿಯೂ ಕೂಡಾ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ತೊಗರಿ, ಸೂರ್ಯಕಾಂತಿ ಹಾಗೂ ಇನ್ನಿತರ ಪ್ರಮುಖ ಬೆಳೆಗಳು ಹಾಳಾಗಿವೆ. ಹೀಗಿದ್ದರೂ ಸರ್ಕಾರ ನಮ್ಮ ನೆರವಿಗೆ ಬರುತ್ತಿಲ್ಲ. ವರ್ಷದ ಗಂಜಿ ಕಳೆದುಕೊಂಡ ಸಂಕಟ ಒಂದೆಡೆಯಾದರೇ, ಇನ್ನೊಂದೆಡೆ ಕೂಲಿ ದೊರಕದೇ ಪರದಾಡುತ್ತಿದ್ದೇವೆ. ಈ ಭಾಗದ ರೈತರ ಸ್ಥಿತಿ ಅಧೋಗತಿಗೆ ತಲುಪಿದೆ. ದಿಕ್ಕು ತೋಚದೇ ನಿಮ್ಮ ಬಳಿ ಬಂದು ಸಂಕಷ್ಟ ತೋಡಿಕೊಳ್ಳುತ್ತಿದ್ದೇವೆ. ನಮಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಿ ಎಂದು ಕಣ್ಣೀರು ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ