ಸಾಕ್ಷ್ಯಾಧಾರ ಇಲ್ಲದೆ ಯಾರನ್ನು ಬಂಧಿಸುವುದಿಲ್ಲ: ಯೋಗಿ ಆದಿತ್ಯನಾಥ್

ಶನಿವಾರ, 9 ಅಕ್ಟೋಬರ್ 2021 (09:26 IST)
ಗೋರಖ್ಪುರ್: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಇಲ್ಲದೆ ಯಾರನ್ನು ಬಂಧಿಸುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡುತ್ತಿರುವ ಪ್ರತಿಪಕ್ಷಗಳ ಕುರಿತು 'ಒಳ್ಳೆಯ ಸಂದೇಶವಾಹಕರಿಲ್ಲ' ಎಂದು ಇದೇ ಸಂದರ್ಭದಲ್ಲಿ ಯೋಗಿ ತಿರುಗೇಟು ನೀಡಿದ್ದಾರೆ.
ಕಳೆದ ಭಾನುವಾರ ನಡೆದ ಹಿಂಸಾಚಾರದಲ್ಲಿ 4 ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಯೋಗಿ, ಕಾನೂನಿನ ಮುಂದೆ ಎಲ್ಲರು ಸಮಾನರು. ಸುಪ್ರೀಂಕೋರ್ಟ್ ಪ್ರಕಾರ, ಯಾವುದೇ ಸಾಕ್ಷ್ಯವಿಲ್ಲದೆ ಯಾರೊಬ್ಬರನ್ನು ಬಂಧಿಸಲಾಗದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಲಿಖಿತ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಯಾರನ್ನು ಬಿಡುವ ಮಾತೇ ಇಲ್ಲ ಎಂದು ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಯೋಗಿ ಹೇಳಿದರು.
ಯಾರಿಗೂ ಅನ್ಯಾಯವಾಗುವುದಿಲ್ಲ ಮತ್ತು ಯಾವುದೇ ಒತ್ತಡದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಿತ್ಯನಾಥ್ ಒತ್ತಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವೇ ಇಲ್ಲ. ಕಾನೂನು ಎಲ್ಲರಿಗೂ ಸುರಕ್ಷತೆಯ ಖಚಿತತೆಯನ್ನು ನೀಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಯೋಗಿ, ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ ಆಗಿದೆ. ಲಖಿಂಪುರ್ ಖೇರಿಗೆ ಹೋಗಲು ಬಯಸಿದ ಅನೇಕ ಮುಖಗಳು ಹಿಂಸಾಚಾರದ ಹಿಂದಿದೆ. ಇದೆಲ್ಲಾ ತನಿಖೆಯ ನಂತರ ಸ್ಪಷ್ಟವಾಗುತ್ತವೆ ಎಂದಿದ್ದಾರೆ.
ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಹೆಸರಿಸಲಾದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದ ಕುರಿತು, ಆರೋಪ ಸಾಬೀತು ಮಾಡುವಂತಹ ವಿಡಿಯೋ ಇಲ್ಲ. ಪುರಾವೆಗಳಿದ್ದರೆ, ಅವರು ಅದನ್ನು ಅಪ್ಲೋಡ್ ಮಾಡಬಹುದು. ಯಾರಿಗೂ ಅನ್ಯಾಯವಾಗುವುದಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಆದರೆ ಯಾವುದೇ ಒತ್ತಡದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದರು.
ಆರೋಪದ ಮೇಲೆ ನಾವು ಯಾರನ್ನೂ ಬಂಧಿಸುವುದಿಲ್ಲ. ಆದರೆ ಯಾರಾದರೂ ತಪ್ಪಿತಸ್ಥರಾಗಿದ್ದರೆ, ಅವನು ಯಾರೆಂದು ಲೆಕ್ಕಿಸದೆ ಆತನನ್ನು ಬಿಡಲಾಗುವುದಿಲ್ಲ' ಎಂದು ಅವರು ಒತ್ತಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ