ನೂತನ ಸಂಸತ್ ಭವನ ಲೋಕಾರ್ಪಣೆ

ಗುರುವಾರ, 18 ಮೇ 2023 (14:31 IST)
ನವದೆಹಲಿ : ನೂತನ ಸಂಸತ್ ಭವನವನ್ನು ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವ ಸಾಧ್ಯತೆಯಿದೆ.
 
ಮೇ ಕೊನೆಯ ವಾರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರಿ 9 ವರ್ಷ ಪೂರ್ಣಗೊಳ್ಳುತ್ತದೆ. ಈ ಕಾರಣಕ್ಕೆ ಮೇ ಕೊನೆಯಲ್ಲಿ ಸಂಸತ್ ಭವನ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.

ಸುಮಾರು 1,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,224 ಸಂಸದರು ಕುಳಿತುಕೊಳ್ಳಲು ಅವಕಾಶವಿದೆ.   ಹೊಸ ಸಂಸತ್ತು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಹೆಸರಿನ ಮೂರು ದ್ವಾರಗಳನ್ನು ಹೊಂದಿದೆ. ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶವನ್ನು ಹೊಂದಿದೆ.

ಡಿಸೆಂಬರ್ 2020 ರಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ್ದರು. ಸರ್ಕಾರ ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿಯನ್ನು ನಿಗದಿ ಪಡಿಸಿತ್ತು. ಆದರೆ ಕೋವಿಡ್ ಮತ್ತು ಇತರೆ ಕೆಲ ಸಮಸ್ಯೆಗಳಿಂದಾಗಿ ಡೆಡ್ಲೈನ್ ವಿಸ್ತರಣೆಯಾಗಿ ಈಗ ಉದ್ಘಾಟನೆಯ ಹಂತಕ್ಕೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಹಿಂದೆ ಮೇ 26, 2014 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಮೋದಿ ಸರ್ಕಾರಕ್ಕೆ 9 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ