ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ : ಸಮುದ್ರದ ರಹಸ್ಯಗಳ ಅನಾವರಣ
ಸೋಮವಾರ, 18 ಸೆಪ್ಟಂಬರ್ 2023 (14:32 IST)
ಭಾರತದ ಮಹತ್ವದ ಚಂದ್ರ ಅನ್ವೇಷಣಾ ಯೋಜನೆ ಚಂದ್ರಯಾನ-3ರ ಯಶಸ್ಸಿನ ಬಳಿಕ, ಭಾರತೀಯ ವಿಜ್ಞಾನಿಗಳು ಒಂದು ವಿನೂತನ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಈ ಮಹತ್ತರ ಸಮುದ್ರಯಾನ ಯೋಜನೆ ದೇಶೀಯ ನಿರ್ಮಾಣದ ಸಬ್ಮರ್ಸಿಬಲ್ ಅನ್ನು ಸಮುದ್ರದ ಮೇಲ್ಮೈಯಿಂದ 6,000 ಮೀಟರ್ ಕೆಳಗಡೆ ಇಳಿಸುವ ಉದ್ದೇಶ ಹೊಂದಿದ್ದು, ಭಾರತದ ಮೊತ್ತ ಮೊದಲ ಆಳ ಸಮುದ್ರ ಅನ್ವೇಷಣೆಗೆ ಮೂವರು ಮಾನವರನ್ನೂ ಇಳಿಸುವ ಗುರಿ ಹೊಂದಿದೆ. ಆಳ ಸಮುದ್ರದ ಅನ್ವೇಷಣೆ ನಡೆಸುವುದು ಅತ್ಯಂತ ಸವಾಲಿನ ಕಾರ್ಯವಾಗಿದೆ.
200 ಮೀಟರ್ಗಿಂತ ಆಳದಲ್ಲಿ, ಸಮುದ್ರ ಅತ್ಯಂತ ಕತ್ತಲಾಗಿರುತ್ತದೆ, ತಣ್ಣಗಾಗಿರುತ್ತದೆ, ಮತ್ತು ಸಾಗರದಾಳದ ಒತ್ತಡ ಸಾಕಷ್ಟು ಹೆಚ್ಚಾಗುತ್ತದೆ. ಈ ಯೋಜನೆಯ ಗುರಿಗಳಲ್ಲಿ, ಸಮುದ್ರದಾಳದ ಸಂಪನ್ಮೂಲಗಳಾದ ಕೋಬಾಲ್ಟ್, ನಿಕ್ಕೆಲ್, ಹಾಗೂ ಮ್ಯಾಂಗನೀಸ್ಗಳನ್ನು ಅನ್ವೇಷಿಸುವುದು ಸೇರಿದೆ. ಅದರೊಡನೆ, ಈ ವಿಶಿಷ್ಟ ವಾತಾವರಣದಲ್ಲಿನ ಜೀವವೈವಿಧ್ಯವನ್ನು ಅನ್ವೇಷಿಸುವ ಗುರಿಯನ್ನೂ ಹೊಂದಿದೆ.
ಈ ಸಾಗರದಾಳದ ಅನ್ವೇಷಣಾ ಯೋಜನೆಗೆ ಕೇಂದ್ರ ಸರ್ಕಾರ 2020-2021ರಿಂದ 2025-2026ರ ತನಕ ಐದು ವರ್ಷಗಳ ಅವಧಿಗೆ ಅನುಮೋದನೆ ನೀಡಿದೆ. ಭೂ ವಿಜ್ಞಾನ ಸಚಿವಾಲಯ, 2021ರಿಂದ 2026ರ ತನಕ ನಡೆಯುವ ಎರಡು ಹಂತಗಳ ಈ ಯೋಜನೆಗೆ ಅಂದಾಜು 4,077 ಕೋಟಿ ವೆಚ್ಚ ತಗಲುವ ನಿರೀಕ್ಷೆಗಳಿವೆ ಎಂದಿದೆ. ಯೋಜನೆಗೆ ಈಗಾಗಲೇ 1,400 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಮೊತ್ತದಲ್ಲಿ, 405.92 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 225.35 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.