ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಸಮಗ್ರ ಕ್ರಮ ಅಗತ್ಯ: ವೆಂಕಯ್ಯ ನಾಯ್ಡು

ಸೋಮವಾರ, 20 ಸೆಪ್ಟಂಬರ್ 2021 (09:27 IST)
ನವದೆಹಲಿ : ದೇಶದ ರೈತರಿಗೆ ಆದಾಯ ಭದ್ರತೆ ಖಾತ್ರಿಪಡಿಸಿಕೊಳ್ಳಲು ಗ್ರಾಮೀಣ ಆರ್ಥಿಕತೆಯ ಕಡೆಗೆ ವಿಶೇಷ ಗಮನ ಹರಿಸಬೇಕಿದೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಕರೆ ನೀಡಿದರು.

ಗುರುಗ್ರಾಮದಲ್ಲಿ ಹರಿಯಾಣ ಅಕಾಡೆಮಿ ಆಫ್ ಹಿಸ್ಟರಿ ಅಂಡ್ ಕಲ್ಚರ್ ಹೊರತಂದಿರುವ 'ಸರ್ ಛೋಟು ರಾಮ್: ಬರಹಗಳು ಮತ್ತು ಭಾಷಣಗಳು' ಐದು ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿಯೂ ರೈತರು ತಡೆರಹಿತವಾಗಿ ತಮ್ಮ ಕಾರ್ಯ ಮುಂದುವರಿಸಿದ್ದರು ಎಂದು ಶ್ಲಾಘಿಸಿದರಲ್ಲದೆ ಉದ್ದೇಶ ಗ್ರಾಮೀಣ ಆರ್ಥಿಕತೆಯ ಒಟ್ಟಾರೆ ಸುಧಾರಣೆ ಮತ್ತು ಗ್ರಾಮೀಣ ಸಮಾಜದ ಸ್ವಾಸ್ಥ್ಯವಾಗಿರಬೇಕು ಎಂದು ಒತ್ತಿ ಹೇಳಿದರು.
ಕೃಷಿಯನ್ನು ಆಧುನೀಕರಿಸುವ ಮತ್ತು ಅದನ್ನು ಹೆಚ್ಚು ಸಮರ್ಥನೀಯವಾಗಿಸಲು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ನಾವು ನಿಯಮಿತವಾಗಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ತಂತ್ರಗಳನ್ನು ಮರುಪರಿಶೀಲಿಸಬೇಕು ಮತ್ತು ನವೀಕರಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ದೇಶದ ಮೂಲ ಸಂಸ್ಕೃತಿ ಎಂದ ಅವರು, ಹಳ್ಳಿಗಳು ಆಹಾರ ಧಾನ್ಯಗಳನ್ನು ಉತ್ಪಾದಿಸುವುದಲ್ಲದೆ ಸಂಸ್ಕಾರ, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಕೂಡ ಜನರಲ್ಲಿ ಬೆಳೆಸುತ್ತವ. ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ಹಳ್ಳಿಗಳು ಅಭಿವೃದ್ಧಿಯಾಗದೇ ಹಿಂದುಳಿದಿದ್ದರೆ ದೇಶವು ಪ್ರಗತಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ