ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬೆನ್ನಲ್ಲೇ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಸಿಎಎ ಎಂದರೆ ಮುಸ್ಲಿಮ್ ವಿರೋಧಿಯೇ? ನಿಜ ವಿಚಾರವೇನು ಇಲ್ಲಿದೆ ಮಾಹಿತಿ.
ಈ ಮೊದಲೇ ಘೋಷಿಸಿದಂತೆ ಲೋಕಸಭೆ ಚುನಾವಣೆಗೂ ಮೊದಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. 2019 ರಲ್ಲಿ ಈ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಲಾಗಿತ್ತು. ಇದೀಗ ಕಾಯ್ದೆ ಜಾರಿಗೊಳಿಸಲಾಗಿದೆ. ಈ ಬಗ್ಗೆ ಗೃಹಸಚಿವ ಅಮಿತ್ ಶಾ ಕಳೆದ ತಿಂಗಳೇ ಘೋಷಣೆ ಮಾಡಿದ್ದರು.
ಆದರೆ ಇದರ ಬೆನ್ನಲ್ಲೇ ಕೆಲವು ಮುಸ್ಲಿಂ ಸಂಘಟನೆಯ, ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಮುಸ್ಲಿಮರ ವಿರೋಧಿ ಎನ್ನುತ್ತಿದ್ದಾರೆ. ಆದರೆ ನಿಜವಾಗಿ ಇದು ಯಾರಿಗೆ ಲಾಭ? ಮುಸ್ಲಿಮರಿಗೆ ತೊಂದರೆಯೇ? ಎನ್ನುವುದಕ್ಕೆ ಇಲ್ಲಿದೆ ಉತ್ತರ. ಸಿಎಎ ಎನ್ನುವುದು 2014 ಡಿಸೆಂಬರ್ 31 ರಿಂದ ನಂತರ ಭಾರತದಲ್ಲೇ ನೆಲೆಸಿರುವ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮೂಲದ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಧರ್ಮದವರಿಗೆ ಖಾಯಂ ಆಗಿ ಭಾರತದ ಪೌರತ್ವ ನೀಡುವುದಾಗಿದೆ. ಆದರೆ ಇದರಲ್ಲಿ ಮುಸ್ಲಿಮರು ಒಳಗೊಂಡಿಲ್ಲ.
ಇದು ಮುಸ್ಲಿಮರ ವಿರೋಧಕ್ಕೆ ಒಂದು ಕಾರಣ. ಮುಸ್ಲಿಮರಿಗೂ ಪೌರತ್ವ ನೀಡಿ. ಮುಸ್ಲಿಮರನ್ನು ಮಾತ್ರ ಕಡೆಗಣಿಸುತ್ತಿರುವುದು ಯಾಕೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನು, ಕೆಲವರು ಇದರಿಂದ ಭಾರತೀಯ ಮುಸ್ಲಿಮರ ಪೌರತ್ವಕ್ಕೂ ತೊಂದರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂದು ಈಗಾಗಲೇ ಕೇಂದ್ರ ಸ್ಪಷ್ಟನೆ ನೀಡಿದೆ. ಇಲ್ಲಿ ಈಗಾಗಲೇ ನೆಲೆಸಿರುವ ಇಲ್ಲಿನ ಪೌರತ್ವ ಹೊಂದಿರುವ ಮುಸ್ಲಿಮರಿಗೆ ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.