ಬೆಂಗಳೂರು: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಂವಿಧಾನ ಬದಲಾಯಿಸಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸ್ಥಾನ ಗೆದ್ದರೆ ಸಂವಿಧಾನ ಬದಲಾಯಿಸಬಹುದು ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಸ್ವತಃ ಬಿಜೆಪಿ ಹೈಕಮಾಂಡ್ ಅನಂತ್ ಕುಮಾರ್ ಗೆ ವಿವರಣೆ ನೀಡಲು ಸೂಚಿಸಿದೆ.
ಇದೀಗ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯವರ ರಹಸ್ಯ ಅಜೆಂಡಾ. ಸಂವಿಧಾನಕ್ಕೆ ಅನಗತ್ಯ ತಿದ್ದುಪಡಿ ತರಲಾಗಿದೆ. ಅವುಗಳನ್ನು ಸರಿಪಡಿಸಬೇಕು.ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಹೆಗಡೆಯವರು ಹೇಳಿದ್ದಾರೆ. ಅವರು ಜನತೆಯಲ್ಲಿ ಬಹುಮತ ಕೇಳಿರುವುದು ಜನರ ಉದ್ದಾರಕ್ಕಾಗಿ ಅಲ್ಲ. ಮನುವಾದಿತನವನ್ನು ಸಮರ್ಥನೆ ಮಾಡಿಕೊಳ್ಳುವುದು, ಮನುಸಂಸ್ಕೃತಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಅನ್ನೋದು ಅವರ ಹಿಡನ್ ಅಜೆಂಡಾ. ಅದಕ್ಕೆ ಇಡೀ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಎಲ್ಲರನ್ನು ಅವರು ವಿರೋಧ ಮಾಡುತ್ತಾರೆ. ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕೂಡಾ ಅನಂತ್ ಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಈಗ ಮತ್ತೊಮ್ಮೆ ಅಂತಹದ್ದೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ. ಈ ಬಾರಿ ಅವರ ಹೇಳಿಕೆ ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.