ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಮರಳಿ ಮಣ್ಣು ಸೇರಿದ ‘ಅಮ್ಮ’

ಮಂಗಳವಾರ, 6 ಡಿಸೆಂಬರ್ 2016 (18:09 IST)
ಚೆನ್ನೈ: ಲಕ್ಷಾಂತರ ಅಭಿಮಾನಿಗಳು. ಅಮ್ಮಾ ಮರಳಿ ಬಾ ಎನ್ನುವ ಕೂಗಿನೊಂದಿಗೆ ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿ ಜಯಲಲಿತಾ ಮಣ್ಣಲ್ಲಿ ಮಣ್ಣಾದರು. ಮರೀನಾ ಬೀಚ್ ನಲ್ಲಿ ಅವರ ಗುರು ಎಂಜಿಆರ್ ಸಮಾಧಿಯ ಪಕ್ಕವೇ ಅವರ ಅಂತ್ಯಕ್ರಿಯೆ ನೆರವೇರಿತು.

ಇದಕ್ಕೂ ಮೊದಲು ರಾಜಾಜಿ ಹಾಲ್ ನಿಂದ ಅಂತ್ಯಕ್ರಿಯೆ ನಡೆಯುವ ಸ್ಥಳದವರೆಗೆ, ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಲಕ್ಷಾಂತರ ಜನರು ಅಮ್ಮನಿಗೆ ಅಂತಿಮ ವಿದಾಯ ಹೇಳಿದರು. ಈ ವೇಳೆ ರಸ್ತೆಯ ಇಕ್ಕೆಲೆಗಳಲ್ಲಿ ಜನ ಸ್ತೋಮ ನೆರೆದಿತ್ತು. ಪುಷ್ಪಾಲಂಕಾರ ಮಿಲಿಟರಿ ಟ್ರಕ್ ನಲ್ಲಿ ಜಯಲಲಿತಾ ಅಂತಿಮ ಯಾತ್ರೆ ನೆರವೇರಿತು.

ರಾಜ್ಯಪಾಲ ವಿದ್ಯಾ ಸಾಗರ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ನೂತನ ಮುಖ್ಯಮಂತ್ರಿ ಪನೀರ್ ಸೆಲ್ವಂ, ಎಐಎಡಿಎಂಕೆ ಪಕ್ಷದ ನಾಯಕರು, ಅಂತಿಮ ನಮನ ಸಲ್ಲಿಸಿದರು. ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಗಲಿದ ನಾಯಕಿಗೆ ಗೌರವ ಸಲ್ಲಿಸಲಾಯಿತು.

ವೈಷ್ಣವ ಸಂಪ್ರದಾಯದಂತೆ ಜಯಲಲಿತಾ ಅಂತಿಮ ವಿಧಿ ವಿಧಾನಗಳನ್ನು ಜಯಲಲಿತಾ ಆತ್ಮೀಯ ಸ್ನೇಹಿತೆ ಶಶಿಕಲಾ ಪೂರೈಸಿದರು. ಈ ವೇಳೆ ಅಭಿಮಾನಿಗಳ ಅಮ್ಮಾ ಎನ್ನುವ ಕೂಗು ಮುಗಿಲು ಮುಟ್ಟಿತ್ತು. ಅಭಿಮಾನಿಗಳ ಸಮ್ಮುಖದಲ್ಲಿ ಜಯಲಲಿತಾರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಸಮಾಧಿ ಸ್ಥಳದಲ್ಲಿ ಇಡಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ