ದೆಹಲಿ : ಕೋಮುವಾದಿ ಮತ್ತು ಪ್ರಚೋದನಾಕಾರಿ ಟ್ವೀಟ್ಗಳಿಗೆ ಹೆಸರುವಾಸಿಯಾಗಿರುವ ಬಿಜೆಪಿಯ ವಿವಾದಿತ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮಿಶ್ರಾ ಅವರನ್ನು ನೇಮಕ ಮಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು, ಈ ವಾರದ ಆರಂಭದಲ್ಲಿ ಘೋಷಿಸಲಾದ ಪಕ್ಷದ ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಇದೆ. ಆದರೆ ಕೆಲವು ಕಾರಣಗಳಿಂದ ಅದನ್ನು ಘೋಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದೆಹಲಿಯ ರಸ್ತೆಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರಿಗೆ ಆದೇಶ ನೀಡಿದ್ದಕ್ಕಾಗಿ 2020 ರಲ್ಲಿ ಮಿಶ್ರಾ ಟೀಕೆಗೆ ಗುರಿಯಾಗಿದ್ದರು. ಈಶಾನ್ಯ ದೆಹಲಿ ಗಲಭೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ನೂರಾರು ಜನರು ಗಾಯಗೊಂಡ ಸಂದರ್ಭದಲ್ಲಿ ಈ ಭಾಷಣವನ್ನು ಮಾಡಲಾಗಿತ್ತು.
ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟನಾಕಾರರು ಮತ್ತು ಅದನ್ನು ಬೆಂಬಲಿಸುವ ಗುಂಪಿನ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ವಕೀಲರ ಗುಂಪು ಮಿಶ್ರಾ ಅವರ “ಪ್ರಚೋದನಕಾರಿ ಟ್ವೀಟ್ಗಳಿಗಾಗಿ” ಪೊಲೀಸ್ ದೂರು ದಾಖಲಿಸಿದೆ.