ಕಾವೇರಿ ನದಿ ನೀರು ಹಂಚಿಕೆ ವಿಚಾರಣೆ ಮುಂದೂಡಿಕೆ : ಕಲಾಪದಲ್ಲಿ ಏನಾಯ್ತು?

ಶನಿವಾರ, 2 ಸೆಪ್ಟಂಬರ್ 2023 (09:39 IST)
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಬಿ.ಆರ್ ಗವಾಯಿ ಬುಧವಾರ ವಿಸ್ತೃತ ವಿಚಾರಣೆ ನಡೆಸುವ ಭರವಸೆ ನೀಡಿದರು.
 
ಆರ್ಟಿಕಲ್ 370 ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಶುಕ್ರವಾರ ಮುಂದುವರಿಸಿತು. ನ್ಯಾ. ಬಿ.ಆರ್ ಗವಾಯಿ ಈ ಸಾಂವಿಧಾನಿಕ ಪೀಠದ ಭಾಗವಾಗಿದ್ದ ಹಿನ್ನಲೆ ಕಾವೇರಿ ಅರ್ಜಿಯನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸಲಿಲ್ಲ. 

ಮಧ್ಯಾಹ್ನದ ಬಳಿಕ ಅರ್ಜಿ ವಿಚಾರಣೆ ಬಗ್ಗೆ ಪ್ರಸ್ತಾಪ ಮಾಡಿದ ತಮಿಳುನಾಡು ಪರ ವಕೀಲ ಮುಕುಲ್ ರೊಹ್ಟಗಿ, ಪ್ರಾಧಿಕಾರದಿಂದಲೂ ನಮ್ಮಗೆ ಅನ್ಯಾಯವಾಗಿದೆ, ಸೋಮವಾರ ಪ್ರಕರಣ ವಿಚಾರಣೆ ನಡೆಸಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿವಾದ ಮಾಡಿದ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್, ಪ್ರಾಧಿಕಾರ ಹದಿನೈದು ದಿನ ನಿತ್ಯ 5000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಅದರಂತೆ ನೀರು ಹರಿಸಲಾಗುತ್ತಿದೆ ಈ ಅವಧಿ ಮುಗಿದ ಬಳಿಕ ಅಂದರೆ ಸೆ. 11 ರಂದು ವಿಚಾರಣೆ ನಡೆಸಿ ಎಂದು ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ