ನಾನು ಸಿಎಂ ಅಭ್ಯರ್ಥಿ ಅಲ್ಲ: ಕೇಜ್ರಿವಾಲ್

ಗುರುವಾರ, 12 ಜನವರಿ 2017 (08:21 IST)
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿ ಪಂಜಾಬ್‌ನವರೇ ಆಗಿರುತ್ತಾರೆ ಎಂದು ನವದೆಹಲಿ ಮುಖ್ಯಮಂತ್ರಿ ,ಆಪ್ ನಾಯಕ ಅರವಿಂದ ಕೇಜ್ರಿವಾಲ್ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ನವದೆಹಲಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಇತರ ರಾಜ್ಯಗಳಲ್ಲಿ ಸಹ ತನ್ನ ಛಾಪನ್ನು ಮೂಡಿಸಲು ಸತಾಯಗತಾಯ ಪ್ರಯತ್ನಿಸುತ್ತಿದೆ. ಅದರಲ್ಲೂ ಪಂಜಾಬ್‌ನಲ್ಲಿ ಆಪ್ ಪ್ರಭಾವ ಹೆಚ್ಚುತ್ತಿದ್ದು ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಬೇಕು ಎಂದು ಆಪ್ ತಲಾಶ್ ನಡೆಸುತ್ತಿದೆ.
 
ಅದರ ಮಧ್ಯೆ ಆಪ್ ರಾಷ್ಟ್ರೀಯ ಸಂಚಾಲಕ, ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಪಂಜಾಬ್‌ನಲ್ಲಿ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಗುಸುಗುಸು ಶುರುವಾಗಿತ್ತು.
 
ಮೊಹಾಲಿಯಲ್ಲಿ ನಡೆದ ಪಕ್ಷದ ರ‍್ಯಾಲಿಯನ್ನುದ್ದೇಶಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಡಿರುವ ಮಾತುಗಳು ಇದಕ್ಕೆ ಮತ್ತಷ್ಟು ಇಂಬು ನೀಡಿದ್ದವು. ಅರವಿಂದ ಕೇಜ್ರಿವಾರ್ ಪಂಜಾಬ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿಕೊಂಡು ನಮ್ಮ ಪಕ್ಷಕ್ಕೆ ಮತ ಚಲಾಯಿಸಿ ಎಂದು ಹೇಳುವ ಮೂಲಕ ಸಿಸೋಡಿಯಾ ರಾಜಕೀಯ ವಲಯದಲ್ಲಿ ಹೊಸ ಕುತೂಹಲವನ್ನು ತಂದಿಟ್ಟಿದ್ದರು. 
 
ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್  ಮತ್ತು ಶಿರೋಮಣಿ ಅಕಾಲಿ ದಳ, ಆಪ್ ಪಂಜಾಬ್ ಮೇಲೆ ಹೊರಗಿನವರನನ್ನು 
ಹೇರಲು ಪ್ರಯತ್ನಿಸುತ್ತಿದೆ ಎಂದಿದ್ದವು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ