ಕೇರಳ AIMS ವೈದ್ಯರ ಸಾಧನೆ: ಹುಡುಗಿಗೆ ಹುಡುಗನ ಕೈಗಳ ಕಸಿ ಯಶಸ್ವಿ

ಭಾನುವಾರ, 1 ಅಕ್ಟೋಬರ್ 2017 (14:39 IST)
ಕೊಚ್ಚಿ: ಕೇರಳದ ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆ(AIMS)ಯ ವೈದ್ಯರು ವೈದ್ಯ ಲೋಕವೇ ಅಚ್ಚರಿ ಪಡುವಂತಹ ಅದ್ಭುತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಏಷ್ಯಾದಲ್ಲೇ ಮೊದಲ ಬಾರಿಗೆ ಯುವತಿಯ ಕೈಗಳಿಗೆ ಯುವಕನ ಕೈಗಳನ್ನ ಕಸಿ ಮಾಡಿದ್ದಾರೆ.

19 ವರ್ಷದ ಶ್ರೇಯಾ ಸಿದ್ದನಗೌಡ ಕಸಿ ಮಾಡಿಸಿಕೊಂಡ ಯುವತಿ. ಪುಣೆಯ ಟಾಟಾ ಮೋಟರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕ ಫಕೀರಗೌಡ ಸಿದ್ದನಗೌಡರ್ ಮತ್ತು ಸುಮಾ ನುಗ್ಗಿಹಳ್ಳಿ ದಂಪತಿಯ ಪುತ್ರಿ ಶ್ರೇಯಾ. ಈಕೆ ಉಡುಪಿಯ ಮಣಿಪಾಲ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರ್ ಓದುತ್ತಿದ್ದಾಳೆ.

ಪುಣೆಯಿಂದ ಮಣಿಪಾಲಕ್ಕೆ ಬರುವಾಗ ಶ್ರೇಯಾ ಪ್ರಯಾಣಿಸುತ್ತಿದ್ದ ಬಸ್‍ ಅಪಘಾತವಾಗಿದ್ದು, ಬಸ್ ಕೆಳಗಡೆ ಸಿಲುಕಿಕೊಂಡಿದ್ದ ಹಿನ್ನೆಲೆಯಲ್ಲಿ ಆಕೆ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ಹೀಗಾಗಿ ಪೋಷಕರು ಕೈಗಳನ್ನು ಕಸಿ ಮಾಡಿಸುವ ನಿರ್ಧಾರ ತೆಗೆದುಕೊಂಡು, ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯನ್ನಸಂಪರ್ಕಿಸಿದ್ದಾರೆ. ಇದೇವೇಳೆ ಕೇರಳದ ಎರ್ನಾಕುಳಂನ ರಾಜಗಿರಿ ಕಾಲೇಜು ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಚಿನ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತನ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಕೈಗಳ ಜೋಡಣೆ ಶಸ್ತ್ರಚಿಕಿತ್ಸೆ ಕುರಿತು ವೈದ್ಯರು ಸಚಿನ್ ಪೋಷಕರಲ್ಲಿ ತಿಳಿಸಿದಾಗ, ಇದಕ್ಕೆ ಸಚಿನ್ ಪೋಷಕರು ದಾನ ಮಾಡಲು ಅನುಮತಿ ನೀಡಿದ್ದರು.

ಸದ್ಯ ಸಚಿನ್ ಕೈಗಳನ್ನು ಶ್ರೇಯಾಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.  ಮುಂದಿನ ವರ್ಷದಲ್ಲಿ ಶ್ರೇಯಾ ಶೇ.85ರಷ್ಟು ಚಲನೆ ಕಾಣಬಹುದು ಎಂದು ವೈದ್ಯರು ಹೇಳಿದ್ದಾರೆ. ಡಾ.ಸುಬ್ರಮಣಿಯನ್ ಐಯ್ಯರ್ ನೇತೃತ್ವದಲ್ಲಿ 20 ಶಸ್ತ್ರಚಿಕಿತ್ಸಕರು, 16 ಮಂದಿ ಅನಸ್ತೇಷಿಯಾ ತಂಡ  13 ಗಂಟೆಗಳ ಕಾಲ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ವಿಶ್ವದಲ್ಲಿ ಇಂತಹ 9 ಕಸಿಗಳು ನಡೆದಿದ್ದು, ಹುಡುಗನ ಕೈಗಳನ್ನು ಹುಡುಗಿಗೆ ಜೋಡಣೆ ಮಾಡಿರುವುದು ಪ್ರಪಂಚದಲ್ಲಿಯೇ ಇದು ಮೊದಲು.

ವೆಬ್ದುನಿಯಾವನ್ನು ಓದಿ