ಲಕ್ನೋ: ಪ್ರಯಾಗ್ ರಾಜ್ ನಲ್ಲಿ ಇಂದಿನಿಂದ ಕುಂಭಮೇಳ ನಡೆಯುತ್ತಿದ್ದು ಈ ಕುಂಭಮೇಳ ನಮ್ಮ ದೇಶದ ನಾಲ್ಕು ಸ್ಥಳಗಳಲ್ಲಿ ಮಾತ್ರ ನಡೆಯುತ್ತದೆ. ಇದು ಯಾಕೆ ಎಂದು ಇಲ್ಲಿದೆ ವಿವರ.
ಕುಂಭಮೇಳ ಎನ್ನುವುದು ನಮ್ಮ ದೇಶದ ಇತಿಹಾಸದ ಪ್ರತೀಕ, ಸಂಸ್ಕೃತಿಯ ಅನಾವರಣಗೊಳಿಸುವ ವೇದಿಕೆ. ಕೋಟ್ಯಾಂತರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪಾಪ ಕಳೆದುಕೊಳ್ಳುತ್ತಾರೆ. ಕುಂಭಮೇಳ ಎನ್ನುವುದು 12 ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಕ್ಷಣವಾಗಿದೆ.
ಇದು ಹರಿದ್ವಾರ, ಪ್ರಯಾಗ್ ರಾಜ್, ಉಜ್ಜಯಿನಿ ಮತ್ತು ನಾಸಿಕ್ ನಲ್ಲಿ ಮಾತ್ರ ನಡೆಯುತ್ತದೆ. ಕೇವಲ ಈ ನಾಲ್ಕು ಸ್ಥಳಗಲ್ಲಿ ಮಾತ್ರ ಕುಂಭ ಮೇಳ ನಡೆಯುವುದಕ್ಕೆ ಪೌರಾಣಿಕ ಮಹತ್ವವಿದೆ. ಸಮುದ್ರಮಂಥನ ಕತೆಗೂ ಕುಂಭಮೇಳದ ಈ ಸ್ಥಳಗಳಿಗೂ ಸಂಬಂಧವಿದೆ.
ಸಮುದ್ರಮಂಥನ ಮಾಡಿದಾಗ ಅಮೃತ ಸಿಗುತ್ತದೆ. ಅಮೃತ ತುಂಬಿದ್ದ ಮಡಕೆಯನ್ನು ಇಂದ್ರನ ಮಗ ಜಯಂತ ಹೊತ್ತು ಸುರಲೋಕಕ್ಕೆ ಹಾರುತ್ತಾನೆ. ಆಗ ರಾಕ್ಷಸರೂ ಅವನ ಕೈಯಿಂದ ಅಮೃತ ಪಡೆಯಲು ಹಿಂದೇ ಹೋಗುತ್ತಾರೆ. ಕೊನೆಗೆ ಅಮೃತ ರಾಕ್ಷಸರ ಕೈಗೆ ಸಿಗುತ್ತದೆ. ಇದನ್ನು ಮರಳಿ ಪಡೆಯಲು ರಾಕ್ಷಸರು ಮತ್ತು ದೇವತೆಗಳ ನಡುವೆ 12 ದಿನಗಳ ಯುದ್ಧ ನಡೆಯುತ್ತದೆ.
ಸಮುದ್ರ ಮಂಥನ ಸಮಯದಲ್ಲಿ ಅಮೃತ ಕಲಶದಿಂದ ನಾಲ್ಕು ಹನಿ ಅಮೃತ ಬಿಂದುಗಳು ನಾಲ್ಕು ಸ್ಥಳಗಳಲ್ಲಿ ಚೆಲ್ಲಿದವು. ಈ ನಾಲ್ಕು ಸ್ಥಳಗಳೇ ಹರಿದ್ವಾರ, ನಾಸಿಕ್, ಪ್ರಯಾಗ್ ರಾಜ್ ಮತ್ತು ಉಜ್ಜಯನಿ. ಹೀಗಾಗಿ ಈ ನಾಲ್ಕು ಪುಣ್ಯ ಸ್ಥಳಗಳಲ್ಲೇ ಕುಂಭಮೇಳ ಆಯೋಜಿಸಲಾಗುತ್ತದೆ.