ಪ್ರತೀಕಾರಕ್ಕೆ ಜೀವ ಅದುಮಿ ಹಿಡಿದಿದ್ದನಾತ; ರೋಮಾಂಚನಗೊಳಿಸುವ ಕಹಾನಿ

ಶುಕ್ರವಾರ, 30 ಸೆಪ್ಟಂಬರ್ 2016 (11:55 IST)
ಅಂದು ಸೆಪ್ಟೆಂಬರ್ 18, ಭಾನುವಾರ, ಉರಿ ಸೇನಾನೆಲೆಯ ಮೇಲೆ ನಡೆದಿತ್ತು ಉಗ್ರರ ಮೋಸದ ದಾಳಿ. ಕೆಲವರು ರಾಕ್ಷಸ ಉಗ್ರರ ಗುಂಡಿಗೆ ಬಲಿಯಾದರೆ, ಮತ್ತೆ ಕೆಲವರು ಕ್ಯಾಂಪ್‌ನಲ್ಲಿ ಉರಿದ ಬೆಂಕಿಯಲ್ಲಿ ಸಜೀವವಾಗಿ ದಹಿಸಿ ಭಸ್ಮವಾಗಿದ್ದರು. ಒಟ್ಟು 17 ಸೈನಿಕರು ಸ್ಥಳದಲ್ಲೇ ಹುತಾತ್ಮರಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಲ್ಲಿ ಒಬ್ಬ ಘಟನೆ ನಡೆದ ಮರುದಿನವೇ ಜೀವವನ್ನು ತ್ಯಜಿಸಿದ್ದ. ಉಳಿದವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಹಾರಿ ಹೋಗಲಿದ್ದ ಜೀವವನ್ನು ಅದುಮಿ ಹಿಡಿದಿದ್ದ ಒಬ್ಬ. ಮತ್ತೀಗ ಆತ ನೆಮ್ಮದಿಯಿಂದ ಕೊನೆಯುಸಿರೆಳೆದಿದ್ದಾನೆ.. ಪ್ರತೀಕಾರ ತೆಗೆದುಕೊಂಡ ತೃಪ್ತಿಯೊಂದಿಗೆ..
ಹೌದು ಉರಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಹಾರ್ ರೆಜಿಮೆಂಟ್‌ನ ನಾಯಕ್ ರಾಜಕಿಶೋರ್ ಸಿಂಗ್ ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಅವರು ಹುತಾತ್ಮರಾಗಿದ್ದಾರೆ. 
 
ಅಲ್ಲಿಗೆ ದಾಳಿಯಲ್ಲಿ ಬಲಿಯಾದವರ ಸಂಖ್ಯೆ 19ಕ್ಕೇರಿದೆ. ಆಗಾಗ ಪ್ರಜ್ಞೆಗೆ ಮರಳುತ್ತಿದ್ದ ಆತ ಸನ್ನೆ ಮಾಡಿ ಕೇಳುತ್ತಿದ್ದನಂತೆ, ಪ್ರತೀಕಾರ ತೀರಿಸಿಕೊಳ್ಳಲಾಯ್ತೇ? ಬಳಿಕ ಮತ್ತೆ ಪ್ರಜ್ಞಾಹೀನನಾಗುತ್ತಿದ್ದನಂತೆ.
 
ಮರಣಶಯ್ಯೆಯಲ್ಲಿ ಮಲಗಿದ್ದ ಕಿಶೋರ್‌ನನ್ನು ನೋಡಲು ಬಂದ ಕಮಾಂಡಿಂಗ್ ಅಧಿಕಾರಿಯ ಬಳಿ ಹೇಳುತ್ತಿದ್ದು ಒಂದೇ ಮಾತು , ಸಾಹೇಬರೇ ಮೋಸದಿಂದ ದಾಳಿ ಮಾಡಲಾಗಿದೆ. ಪ್ರತೀಕಾರ ತೀರಿಸಿಕೊಂಡಿದ್ದರೆ ಸಾಯುವ ದುಃಖವಿರುತ್ತಿರಲಿಲ್ಲ.
 
ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ. ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಕೂಡ ಘೋಷಿಸಿದ್ದರು. ಅಂತೆಯೇ ನಿನ್ನೆ ಉಗ್ರರ ಕ್ಯಾಂಪ್ ಮೇಲೆ 'ನಿರ್ದಿಷ್ಟ ದಾಳಿ' ನಡೆಸಿದ ಸೈನಿಕರು 40  ರಿಂದ 50 ಉಗ್ರರ ರುಂಡ ಚೆಂಡಾಡಿದ್ದರು.  
 
ಸೇಡು ತೀರಿಸಿಕೊಂಡ ಸುದ್ದಿ ಕೇಳಲಷ್ಟೇ ಆತ ಜೀವ ಹಿಡಿದುಕೊಂಡಿರಬೇಕು. ನಿನ್ನೆ ಮಧ್ಯಾಹ್ನ ಆತ ಮತ್ತೆ ಕಣ್ಣು ತೆರೆದಿದ್ದ. ಯಶಸ್ವಿ ದಾಳಿ ನಡೆಸಿದ ವಿಚಾರವನ್ನು ಆತನಿಗೆ ಸನ್ನೆ ಮಾಡಿ ತಿಳಿಸಲಾಯಿತು. ನಾವು ಪ್ರತೀಕಾರ ತೀರಿಸಿಕೊಂಡೆವು. 19ರ ಬದಲು 50 ಬಲಿ ಪಡೆದೆವು.  ಮನೆಯೊಳಗೆ ನುಗ್ಗಿ ಬಡಿದು ಹಾಕಿದ್ದೇವೆ. ಇದನ್ನು ಕೇಳಿದ ತಕ್ಷಣ ಸಾವಿನ ಹಾದಿಯಲ್ಲಿದ್ದ ರಾಜಕಿಶೋರ್ ಕಣ್ಣು ಪಳಪಳನೆ ಹೊಳೆಯಿತು. ಕಣ್ಣಿಂದ ಸಂತೋಷದ ಹನಿಗಳು ಉದುರಿದವು. ಮತ್ತೆ ಆ ಕಣ್ಣುಗಳು ನಿಧಾನವಾಗಿ ಮುಚ್ಚಿದವು. 3.30ಕ್ಕೆ ಅವರು ನಮ್ಮನ್ನು ಅಗಲಿದರು. ವೀರ ಸೈನಿಕ ಹುತಾತ್ಮನೆಂಬ ಪಟ್ಟದೊಂದಿಗೆ ಮಾತೃಭೂಮಿಯಿಂದ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ್ದ... ದೇಶವನ್ನು ಕಣ್ಣೀರ ಕಡಲಲ್ಲಿ ಬಿಟ್ಟು...ಜೈ ಹಿಂದ್.. ಜೈ ಹಿಂದ್ ಕೀ ಸೇನಾ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ