ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಇತ್ತಾ: ಅನಿರುದ್ಧ ಹೇಳಿದ್ದೇನು

Krishnaveni K

ಶನಿವಾರ, 9 ಆಗಸ್ಟ್ 2025 (17:13 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವ್ಧನ್ ಸಮಾಧಿ ನೆಲಸಮ ಮಾಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ಸಮಾಧಿ ನೆಲಸಮ ಮಾಡುವ ಬಗ್ಗೆ ಕುಟುಂಬದವರಿಗೆ ಮೊದಲೇ ಮಾಹಿತಿ ನೀಡಲಾಗಿತ್ತಾ? ಈ ಅನುಮಾನಗಳಿಗೆ ಇಂದು ನಟ ಅನಿರುದ್ಧ್ ಜತ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ದಿಡೀರ್ ಪತ್ರಿಕಾಗೋಷ್ಠಿ ಕರೆದಿದ್ದ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಅಭಿಮಾನಿಗಳ ಅಸಮಾಧಾನಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ಈಗ ನೆಲಸಮ ಮಾಡಲಾಗಿದೆ.

ಇದು ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ. ಕೆಲವರ ಸಿಟ್ಟು ವಿಷ್ಣುವರ್ಧನ್ ಕುಟುಂಬದವರ ವಿರುದ್ಧವೂ ಇದೆ. ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳಲು ಕುಟುಂಬದವರು ಆಸಕ್ತಿ ತೋರಿಸಲಿಲ್ಲ ಎಂದು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅನಿರುದ್ಧ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

‘ಅಪ್ಪಾವ್ರ ಸಮಾಧಿ ತೆರವುಗೊಳಿಸಿದ್ದಕ್ಕೆ ನಮಗೂ ತೀರಾ ಬೇಸರವಾಗಿದೆ. ಇದು ಆಗಬಾರದಿತ್ತು. ನಾವೂ ಈ ಹಿಂದೆ ಸಾಕಷ್ಟು ಬಾರಿ ಬಾಲಣ್ಣ  ಕುಟುಂಬದವರಿಗೆ ಪ್ರತೀ ವರ್ಷದ ಎರಡು ಬಾರಿ ಅಭಿಮಾನಿಗಳಿಗೆ ಇಲ್ಲಿಗೆ ಬಂದು ಹೋಗಲು ಅವಕಾಶ ಕೊಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದೆವು. ಈಗ ಸಮಾಧಿ ತೆರವುಗೊಳಿಸಲು ಹೊರಟಿದ್ದ ವಿಚಾರ ನಮಗೆ ಗೊತ್ತೇ ಇರಲಿಲ್ಲ. ಯಾವ ಉದ್ದೇಶಕ್ಕೆ ಅವರು ಹಾಗೆ ಮಾಡಿದರೋ ಗೊತ್ತಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ.

‘ನಮ್ಮ ಮೇಲೆ ಅಸಮಾಧಾನ ತೋರುತ್ತಿರುವ ಕೆಲವರಿಗೆ ನಿಜವಾಗಿ ನಮ್ಮ ಹೋರಾಟ ಏನೆಂದೇ ಗೊತ್ತಿಲ್ಲ. ಗೊತ್ತೇ ಇಲ್ಲದೇ ಮಾತನಾಡುತ್ತಿದ್ದಾರೆ. ಅದಕ್ಕೇ ಹಲವು ಬಾರಿ ನಾನೇ ಕರೆದಿದ್ದೇನೆ, ಬನ್ನಿ ಮಾತನಾಡೋಣ ಎಂದು. ಆದರೆ ಅವರು ಯಾರೂ ಬರಲೇ ಇಲ್ಲ. ಮಾತುಕತೆಗೇ ಬರದೇ ನಮ್ಮ ಮೇಲೆ ದೂಷಿಸುವುದು ಎಷ್ಟು ಸರಿ ಹೇಳಿ? ನಾನು ಯಾರ ಹೆಸರನ್ನೂ ಇಲ್ಲಿ ಹೇಳಲ್ಲ. ಎಲ್ಲವೂ ನಿಮಗೆ ಗೊತ್ತೇ ಇದೆ. ನಿಜವಾದ ವಿಷ್ಣುವರ್ಧನ್ ಅಭಿಮಾನಿಗಳು ಈಗಲೂ ನಮ್ಮ ಜೊತೆಗಿದ್ದಾರೆ. ನಮ್ಮ ಕುಟುಂಬದ ಜೊತೆಗಿದ್ದಾರೆ. ಆದರೆ ಯಾರೋ ಗೊತ್ತಿಲ್ಲದವರು ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಅನಿರುದ್ಧ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ