ಇನ್ನೆರಡು ದಿನಗಳೊಳಗೆ ಜಯಲಲಿತಾ ದೇಹ ಸ್ಥಿತಿ ಬಹಿರಂಗ ಪಡಿಸಿ: ಆದೇಶಿಸಿದ ಹೈಕೋರ್ಟ್

ಮಂಗಳವಾರ, 4 ಅಕ್ಟೋಬರ್ 2016 (12:32 IST)
ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು ಜಯಾ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದೆ. 

 
ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 
ಆಸ್ಪತ್ರೆಯಿಂದ ಮಾಹಿತಿ ಕಲೆ ಹಾಕಿ ಏನಾಗಿದೆ ಎಂಬುದನ್ನು  ಕೋರ್ಟ್ ಮೂಲಕ ಇನ್ನೆರಡು ದಿನಗಳೊಳಗೆ ಬಹಿರಂಗ ಪಡಿಸಿ ಎಂದು ತಮಿಳುನಾಡು ಸರ್ಕಾರಕ್ಕೆ ತಾಕೀತು ಮಾಡಿದೆ. 
 
ಜಯಾ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆ ನಿಮಗೇನು ಎಂದು ಹೈಕೋರ್ಟ್ ರಾಮಸ್ವಾಮಿಯವರನ್ನು ಕೇಳಲಾಗಿ, 
ಸಿಎಂ ಆಗಿರುವ ಜಯಲಲಿತಾ ಆರೋಗ್ಯದ ನಮಗೆ ಕಾಳಜಿ ಇದೆ. ಅಪೋಲೋ ಆಸ್ಪತ್ರೆ ಕೇವಲ ಪತ್ರಿಕಾ ಪ್ರಕಟಣೆಯನ್ನು ನೀಡುತ್ತಿದೆ ಹೊರತು, ತಮಿಳುನಾಡು ಸರ್ಕಾರ ಈ ಕುರಿತು ಮಾಹಿತಿ ನೀಡಿಲ್ಲ ಎಂದು ರಾಮಸ್ವಾಮಿ ವಾದಿಸಿದ್ದರು. 
 
ಜಯಲಲಿತಾ ಕಳೆದ ಸೆಪ್ಟೆಂಬರ್ 22 ರಂದು ನಿರ್ಜಲೀಕರಣ ಮತ್ತು ಜ್ವರದ ಬಾಧೆಗೊಳಗಾಗಿ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಕೆಲವು ದಿನಗಳ ಮಟ್ಟಿಗೆ ಅವರನ್ನು ನಿಗಾವಣೆಯಲ್ಲಿ ಇಡಲಾಗುವುದು ಎಂದು ಆಸ್ಪತ್ರೆ ಸೆಪ್ಟೆಂಬರ್ 23 ರಿಂದ ಪತ್ರಿಕಾ ಹೇಳಿಕೆಯನ್ನು ನೀಡುತ್ತಲೇ ಬಂದಿದೆ. ಆದರೆ ಅವರ ಆರೋಗ್ಯದ ಕುರಿತಾದ ಯಾವುದೇ ನಂಬಲರ್ಹ ವರದಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.
 
ಜಯಾ ದೇಹ ಸ್ಥಿತಿ ಬಗ್ಗೆ ಊಹಾಪೋಗಳು ಎದ್ದಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡುವಂತೆ ಟ್ರಾಫಿಕ್ ರಾಮಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ಜಯಾ ಆರೋಗ್ಯ ಹೇಗಿದೆ? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ? ಅವರು ತಮ್ಮ ಸಚಿವ ಸಂಪುಟದ ಸದಸ್ಯರನ್ನು ಭೇಟಿಯಾಗಿದ್ದಾರೆಯೇ? ಅವರು ಆಸ್ಪತ್ರೆಯಲ್ಲಿರುವ ಫೋಟೋವನ್ನು ಬಿಡುಗಡೆ ಮಾಡಿ ಎಂದು ರಾಮಸ್ವಾಮಿ ಅರ್ಜಿಯಲ್ಲಿ ಕೇಳಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ