ಥಾಣೆ: ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ರೇಪ್ ಆಂಡ್ ಮರ್ಡರ್ ಕೇಸ್ ಸದ್ದು ಮಾಡುತ್ತಿರುವಾಗಲೇ ಮಹಾರಾಷ್ಟ್ರದಲ್ಲಿ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ವರದಿಯಾಗಿದೆ. ಆದರೆ ಇಲ್ಲಿ ಪೋಷಕರು ಇಡೀ ಊರನ್ನೇ ಕಟ್ಟಿಕೊಂಡು ಪ್ರತಿಭಟನೆಗೆ ಇಳಿದಿದ್ದಾರೆ.
ಥಾಣೆಯ ಶಾಲೆಯೊಂದರಲ್ಲಿ ನಾಲ್ಕು ವರ್ಷದ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಘಟನೆ ಬಗ್ಗೆ ತಿಳಿಯುತ್ತಿದ್ದಂತೇ ಕ್ರುದ್ಧರಾದ ಪೋಷಕರು ಇಡೀ ಊರನ್ನೇ ಕಟ್ಟಿಕೊಂಡು ಬದ್ಲಾಪುರ ರೈಲ್ವೇ ನಿಲ್ದಾಣದ ಹಳಿ ಆಕ್ರಮಿಸಿಕೊಂಡು ಪ್ರತಿಭಟನೆಗೆ ಮುಂದಾದವು.
ಪೋಷಕರ ಪ್ರತಿಭಟನೆಯ ಕಾವಿಗೆ ಬೆಚ್ಚಿ ಸ್ವತಃ ಸಿಎಂ ಏಕನಾಥ ಶಿಂಧೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸಿದರು. ಅಲ್ಲದೆ, ಶಾಲೆಯ ಮ್ಯಾನೇಜ್ ಮೆಂಟ್ ಘಟನೆ ಸಂಬಂಧ ಪ್ರಾಂಶುಪಾಲ ಮತ್ತು ಇಬ್ಬರು ಸಹಾಯಕರನ್ನು ವಜಾಗೊಳಿಸಿ ಕ್ರಮ ಕೈಗೊಂಡಿತು.
ಪುಟಾಣಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಇಡೀ ಪೋಷಕ ವರ್ಗದ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿತ್ತು. ಶಾಲೆಯ ಸಹಾಯಕ ಕಿಂಡರ್ ಗಾರ್ಟನ್ ನಲ್ಲಿ ಓದುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆತನನ್ನು ಬಂಧಿಸಲಾಗಿದೆ. ಮಕ್ಕಳು ಟಾಯ್ಲೆಟ್ ಗೆ ತೆರಳಿದ್ದಾಗ ಜೊತೆಗೆ ಬಂದಿದ್ದ ಸಹಾಯಕ ಅನುಚಿತವಾಗಿ ಸ್ಪರ್ಶಿಸಿದ್ದ ಎನ್ನಲಾಗಿದೆ. ಇದೀಗ ಆತನ ಮೇಲೆ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಒಂದು ಘಟನೆ ವರದಿಯಾಗುತ್ತಿದ್ದಂತೇ ಇಡೀ ಊರಿಗೆ ಊರೇ ಒಗ್ಗಟ್ಟಾಗಿ ನಿಂತು ಹೋರಾಟ ನಡೆಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.