ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ರೇಪ್ ಮಾಡಿ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿರುವ ಸಂಜಯ್ ರಾಯ್ ಬಗ್ಗೆ ಆತನ ಅತ್ತೆ ಭಯಾನಕ ವಿಚಾರವನ್ನು ಹೊರಗಿಟ್ಟಿದ್ದಾರೆ.
ಸಂಜಯ್ ರಾಯ್ ಗೆ ಈಗಾಗಲೇ ಮದುವೆಯಾಗಿತ್ತು. ಆದರೆ ಆತ ತನ್ನ ಹೆಂಡತಿಯನ್ನು ನಡೆಸಿಕೊಂಡ ಬಗ್ಗೆ ಆತನ ಅತ್ತೆ ಬಾಯ್ಬಿಟ್ಟಿದ್ದಾರೆ. ಆಕೆ ಗರ್ಭಿಣಿಯಾಗಿದ್ದಾಗ ಆಕೆಯ ಹೊಟ್ಟೆಗೆ ಒದ್ದು ಗರ್ಭಪಾತಕ್ಕೆ ಕಾರಣವಾಗಿದ್ದ ಎಂದು ಪತ್ನಿಯ ತಾಯಿ ಹೇಳಿಕೊಂಡಿದ್ದಾರೆ.
ಸಂಜಯ್ ಮತ್ತು ಪತ್ನಿ ಮದುವೆಯಾಗಿ ಎರಡು ವರ್ಷವಾಗಿತ್ತು. ಮೊದಲ ಆರು ತಿಂಗಳು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಈ ವೇಳೆ ಸಂಜಯ್ ಆಕೆಯ ಹೊಟ್ಟೆಗೆ ಒದ್ದು ಆಕೆಯ ಗರ್ಭಪಾತಕ್ಕೆ ಕಾರಣವಾಗಿದ್ದ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೆವು ಎಂದು ಅತ್ತೆ ಹೇಳಿದ್ದಾರೆ. ಈಗ ಸಂಜಯ್ ಪತ್ನಿ ತಾಯಿ ಜೊತೆಗಿದ್ದು ಆಕೆ ಅನಾರೋಗ್ಯದಿಂದ ಬಳಲಲುತ್ತಿದ್ದಾರೆ ಎನ್ನಲಾಗಿದೆ.
ಸಂಜಯ್ ರಾಯ್ ಗೆ ಅಶ್ಲೀಲ ವಿಡಿಯೋ ನೋಡುವ ಚಟವಿತ್ತು. ಆತನ ಮೊಬೈಲ್ ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಈತ ಆಸ್ಪತ್ರೆಯಲ್ಲಿರುವ ಬೇರೆ ಹೆಣ್ಣು ಮಕ್ಕಳ ಜೊತೆಯೂ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಈಗ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ.