ಬಿಎಸ್ ಎಫ್ ಯೋಧರೊಂದಿಗೆ ಶ್ರೀನಗರದಲ್ಲಿ ಪ್ರಧಾನಿ ಮೋದಿ ಯೋಗ

Krishnaveni K

ಶುಕ್ರವಾರ, 21 ಜೂನ್ 2024 (09:49 IST)
ಶ್ರೀನಗರ: ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಪ್ರಧಾನಿ ಮೋದಿ ಪ್ರತೀ ವರ್ಷದಂತೆ ಇಂದೂ ವಿಶೇಷ ಸ್ಥಳದಲ್ಲಿ ಯೋಗ ಮಾಡಿದ್ದಾರೆ. ಶ್ರೀನಗರದ ದಾಲ್ ಸರೋವರ ಬಳಿ ಬಿಎಸ್ ಎಫ್ ಯೋಧರೊಂದಿಗೆ ಮೋದಿ ಈ ಬಾರಿ ಯೋಗ ಮಾಡಿದ್ದಾರೆ.

ಸತತ ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೋದಿ ಈ ಅವಧಿಯಲ್ಲಿ ಮೊದಲ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತೀ 2014 ರಲ್ಲಿ ಮೋದಿ ಪ್ರಧಾನಿಯಾದಾಗ ಮೊದಲ ಬಾರಿಗೆ ವಿಶ್ವ ಸಂಸ್ಥೆಯಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ಪ್ರಸ್ತಾವನೆ ಸಲ್ಲಿಸಿದ್ದರು.

ಸತತವಾಗಿ ಕಳೆದ 10 ವರ್ಷಗಳಿಂದ ಮೋದಿ ಯೋಗ ದಿನಾಚರಣೆಯನ್ನು ಒಂದೊಂದು ವಿಭಿನ್ನ ತಾಣದಲ್ಲಿ ಆಚರಿಸುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಕರ್ನಾಟಕದ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಭಾರತದ ಶಿರ ಶ್ರೀನಗರದ ದಾಲ್ ಸರೋವರದ ಸುಂದರ ಪರಿಸರದಲ್ಲಿ ಗಡಿ ಭದ್ರತಾ ಯೋಧರೊಂದಿಗೆ ಯೋಗ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ‘ಯೋಗಾಸನದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗಾಭ್ಯಾಸದಿಂದ ಅನೇಕ ರೋಗಗಳಿಗೆ ಮುಕ್ತಿ ಸಿಗಲಿದೆ. ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಆರೋಗ್ಯ ರಕ್ಷಣೆ, ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದು ಅಗತ್ಯ’ ಎಂದು ಹೇಳಿದರು.

ಈ ಬಾರಿ ಮೋದಿ ಯೋಗಾಭ್ಯಾಸ ಕೊಂಚ ತಡವಾಗಿ ಆರಂಭವಾಯಿತು. ಮಳೆಯಿಂದಾಗಿ ನಿಗದಿತ ಸಮಯಕ್ಕೆ ಯೋಗಾಭ್ಯಾಸ ಆರಂಭಿಸಲು ಸಾಧ್ಯವಾಗಲಿಲ್ಲ. ನಿಗದಿಯಂತೆ 6.30 ಕ್ಕೆ 7 ಸಾವಿರ ಮಂದಿಯೊಂದಿಗೆ ಮೋದಿ ಯೋಗ ಮಾಡಬೇಕಾಗಿತ್ತು. ಆದರೆ ಮಳೆಯಿಂದಾಗಿ ಒಳಾಂಗಣದಲ್ಲಿ ಕೊಂಚ ತಡವಾಗಿ ಸುಮಾರು 50 ಜನರೊಂದಿಗೆ ಮೋದಿ ಯೋಗ ಮಾಡಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ