ಅನ್ಯ ಮಹಿಳೆಗಾಗಿ ಹೆಂಡತಿ ಮಕ್ಕಳನ್ನು ಕೊಂದು ಮನೆಯಲ್ಲೇ ಹೂತು ಪರಾರಿಯಾಗಿದ್ದ ವ್ಯಕ್ತಿ ಬಂಧನ
ಶುಕ್ರವಾರ, 3 ಸೆಪ್ಟಂಬರ್ 2021 (08:23 IST)
ಉತ್ತರಪ್ರದೇಶ (ಸೆ, 03) : ಅನ್ಯ ಮಹಿಳೆಗಾಗಿ ತನ್ನ ಹೆಂಡತಿ ಮತ್ತು ಪುಟ್ಟ ಮಗುವನ್ನು ಕೊಂದೂ ಮನೆಯಲ್ಲೇ ಹೂತಿದ್ದ, ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ಕೊಂಡು ತನ್ನದೇ ಹೆಣವೆಂದು, ತಾನೂ ಸಹ ಮೃತಪಟ್ಟಂತೆ ಸಾಕ್ಷಿಗಳನ್ನು ಸೃಷ್ಟಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿರುವ ಪ್ರಕರಣ ಪಶ್ಚಿಮ ಉತ್ತರಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ 2018ರಲ್ಲಿ ನಡೆದಿದ್ದು, ಪೊಲೀಸರು ಈಗ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡಿ ಅವರ ಶವಗಳನ್ನು ಮನೆಯಲ್ಲಿಯೇ ಹೂತು ಹಾಕಿದ್ದರ. ಮೂರು ವರ್ಷಗಳ ಹಿಂದಿನ ಘೋರ ಅಪರಾಧ ಪ್ರಕರಣವನ್ನು ಶೋಧಿಸುವಲ್ಲಿ ಸಫಲರಾಗಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಹೇಳುವಂತೆ, 34 ವರ್ಷದ ರಾಕೇಶ್, 2018 ರಲ್ಲಿ ಗ್ರೇಟರ್ ನೋಯ್ಡಾದಲ್ಲಿರುವ ಖಾಸಗಿ ಪ್ರಯೋಗಾಲಯದಲ್ಲಿ ರೋಗಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧವಿದ್ದ ಕಾರಣ ತನ್ನ ಸಂಸಾರದ ಎಲ್ಲರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಡಯನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಆರೋಪಿ, ಆತನ ಕುಟುಂಬದ ಮೂವರು ಸದಸ್ಯರು ಹಾಗೂ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಯ ತಂದೆ ನಿವೃತ್ತ ಪೊಲೀಸ್ ಆಗಿದ್ದು, ಈ ಕೊಲೆಯ ವಿವಿಧ ಹಂತಗಳಲ್ಲಿ ಆರೋಪಿಯ ಕುಟುಂಬ ಆತನಿಗೆ ಸಹಾಯ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
"ಆರೋಪಿ ರಾಕೇಶ್, ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು 2018 ರ ಫೆಬ್ರವರಿಯಲ್ಲಿ ಕೊಲೆ ಮಾಡಿದ್ದರು. ಮಕ್ಕಳಲ್ಲಿ ಒಂದು ಮಗುವಿಗೆ ಮೂರು ವರ್ಷ ಮತ್ತೊಂದು ಮಗುವಿಗೆ 18 ತಿಂಗಳು. ಕೊಲೆ ಮಾಡಿ ಶವಗಳನ್ನು ಮನೆಯಲ್ಲಿ ಹೂತು ಹಾಕಿ, ಅದರ ಮೇಲೆ ಸಿಮೆಂಟ್ ಕಾಂಕ್ರಿಟ್ ಹಾಕಿದ್ದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ಹೆಂಡತಿ, ತನ್ನ ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು" ಎಂದು ಕಸ್ಗಂಜ್ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಹೇಳಿದ್ದಾರೆ.
"ಮಗಳು ನಾಪತ್ತೆಯಾದ ಕೆಲವು ತಿಂಗಳುಗಳ ನಂತರ, ರಾಕೇಶ್ ಅವರ ಮಾವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಪಹರಣ ಮತ್ತು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ನೋಯ್ಡಾದಲ್ಲಿ ಪೋಲಿಸ್ ಕೇಸ್ ದಾಖಲಿಸಿದರು. ನೋಯ್ಡಾ ಪೊಲೀಸರು ಕಾಣೆಯಾದ ಪ್ರಕರಣ ಮತ್ತು ಮಾವ ದಾಖಲಿಸಿದ ಪ್ರಕರಣ ಎರಡನ್ನೂ ತನಿಖೆ ಮಾಡುತ್ತಿದ್ದರು, ಆದರೆ ಎರಡೂ ಪ್ರಕರಣಗಳಲ್ಲಿ ಯಾವುದೇ ಪ್ರಮುಖ ಸುಳಿವು ಸಿಕ್ಕಿರಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.
"ಈ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಆರೋಪಿ ಮತ್ತು ಅವನ ಗೆಳತಿ ಸೇರಿಕೊಂಡು ಕಸ್ಗಂಜ್ನ ತನ್ನ ಹಳ್ಳಿಯಲ್ಲಿ ರಾಕೇಶ್ನನ್ನೇ ಹೋಲುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದರು. ಕೊಲೆ ಮಾಡಿ ಆತನ ತಲೆ ಮತ್ತು ಕೈಗಳನ್ನು ಕತ್ತರಿಸಿ ಬೇರೆಡೆ ಸುಟ್ಟು ಹಾಕಿದರು. ನಂತರ ರಾಕೇಶ್ ಬಟ್ಟೆಗಳನ್ನು ಮೃತದೇಹಕ್ಕೆ ಹಾಕಿ, ತನ್ನ ಗುರುತಿನ ಚೀಟಿಯಲ್ಲಿ ಶವದ ಮೇಲೆ ಎಸೆದು ಹರಿಯಾಣಕ್ಕೆ ಪರಾರಿಯಾಗಿದ್ದರು" ಎಂದು ಅವರು ವಿವರಿಸಿದ್ದಾರೆ.
ಬಳಿಕ ಕಸ್ಗಂಜ್ನಲ್ಲಿ ಈ ಕೊಲೆಯ ಬಗ್ಗೆ ದೂರು ದಾಖಲಾಗಿ, ತಲೆಯಿಲ್ಲದ ಶವದ ಡಿಎನ್ಎ ಪರೀಕ್ಷೆ ನಡೆಸಿದ ಬಳಿಕ ಇದು ರಾಕೇಶ್ ಶವವಲ್ಲ ಎಂದು ತಿಳಿದು ಬಂದಿದೆ. ನಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಆತ ಹರಿಯಾಣದಲ್ಲಿ ದಿಲೀಪ್ ಶರ್ಮಾ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದು ಪತ್ತೆಯಾಗಿ ಪೊಲೀಸರು ಬಂಧಿಸಿದ್ದಾರೆ.
ಒಟ್ಟಾರೆ ಮೊದಲು ಮಾಡಿದ ಮೂರು ಕೊಲೆಗಳನ್ನು ಮುಚ್ಚಿಡಲು, ಮತ್ತೊಂದು ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷಗಳ ಹಿಂದಿನ ಪ್ರಕರಣ ಬಹಿರಂಗವಾಗಿದೆ. ಆದರೆ, ಈ ಘಟನೆಯಿಂದ ಗ್ರೆಟರ್ ನೋಯ್ಡಾದ ಜನ ಬೆಚ್ಚಿಬಿದ್ದಿದ್ದಾರೆ.