ಭೋಪಾಲ್: ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ ಗೆಳತಿ ಮದುವೆಗೆ ಒತ್ತಾಯಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಕೆಯನ್ನು ಕೊಂದು ಕಳೆದ 8 ತಿಂಗಳಿನಿಂದ ಫ್ರಿಡ್ಜ್ ನಲ್ಲಿಟ್ಟಿದ್ದ ಬೆಚ್ಚಿ ಬೀಳಿಸುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಸಂಜಯ್ ಪಾಟಿದಾರ್ ಎಂಬ ಆರೋಪಿ ತನ್ನ ಪಿಂಕಿ ಎನ್ನುವ ಗೆಳತಿಯನ್ನು ಕೊಲೆ ಮಾಡಿ ಸೀರೆ, ಆಭರಣ ಸಮೇತ ಫ್ರಿಡ್ಜ್ ನಲ್ಲಿಟ್ಟಿದ್ದ. ಶವ ಕೊಳೆತ ಸ್ಥಿತಿಯಲ್ಲಿದ್ದುದನ್ನು ನೋಡಿದ ಪೊಲೀಸರು ಕಳೆದ ಜೂನ್ ನಲ್ಲೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ 5 ವರ್ಷಗಳಿಂದ ಪಿಂಕಿ ಜೊತೆ ಆರೋಪಿ ಲಿವ್ ಇನ್ ಸಂಬಂಧ ಹೊಂದಿದ್ದ. ಈ ವೇಳೆ ಇಬ್ಬರೂ ದೈಹಿಕವಾಗಿಯೂ ಒಂದಾಗಿದ್ದರು. ಇತ್ತೀಚೆಗೆ ಪಿಂಕಿ ಮದುವೆಯಾಗುವಂತೆ ಆರೋಪಿಯನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಆರೋಪಿ ಕೊಲೆಗೆ ಸ್ಕೆಚ್ ಹಾಕಿದ್ದ.
ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಗೆಳತಿಯನ್ನು ಕೊಂದು ಫ್ರಿಡ್ಜ್ ನಲ್ಲಿಟ್ಟು ಆರೋಪಿ ಮನೆ ಖಾಲಿ ಮಾಡಿದ್ದಾನೆ. ಕೆಲವು ದಿನಗಳಿಂದ ಮನೆಯಿಂದ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಶಂಕೆಗೊಂಡ ನೆರೆಹೊರೆಯವರು ಮನೆ ಮಾಲಿಕರಿಗೆ ತಿಳಿಸಿದ್ದರು. ಬಂದು ನೋಡಿದಾಗ ಫ್ರಿಡ್ಜ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಮಾಲಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಪ್ರಕರಣ, ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು ನೆನಪಿಸುವಂತೆಯೇ ಇದೆ ಈ ಪ್ರಕರಣ. ಇದೀಗ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.