ನವದೆಹಲಿ : ಮಣಿಪುರ ಶೀಘ್ರದಲ್ಲೇ ಮತ್ತೊಮ್ಮೆ ಶಾಂತಿಯ ಬೆಳಕನ್ನು ಕಾಣಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಭಾಷಣ ಮಾಡುವಾಗ, ಸಂಘರ್ಷ ಪೀಡಿತ ಮಣಿಪುರದ ಜನತೆಗೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ನೀಡಿದ್ದಾರೆ.
ದೇಶ ಮತ್ತು ಸಂಸತ್ತು ನಿಮ್ಮೊಂದಿಗಿದೆ ಎಂದು ಮಣಿಪುರದ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಹೇಳಲು ಬಯಸುತ್ತೇನೆ. ಮಣಿಪುರವನ್ನು ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡುತ್ತೇವೆ ಎಂದು ನಾನು ಮಣಿಪುರದ ಜನರಿಗೆ ಭರವಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ.
ಮಣಿಪುರದಲ್ಲಿ ಹಿಂಸೆ ಶುರುವಾಗಿದೆ. ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಮಾತುಕತೆ ನಡೆಯುತ್ತಿದೆ, ಶಾಂತಿ ಮರುಕಳಿಸಲಿದೆ. ಮಣಿಪುರ ಜನರಲ್ಲೂ ಮನವಿ ಮಾಡುತ್ತೇನೆ. ದೇಶ ನಿಮ್ಮ ಜೊತೆಗೆ ಇದೆ. ಸದನ ನಿಮ್ಮ ಜೊತೆಗಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಕೊಳ್ಳೋಣ ಎಂದು ತಿಳಿಸಿದ್ದಾರೆ.