ಮನೀಶ್ ಸಿಸೊಡಿಯಾ ಅರೆಸ್ಟ್ ಆಗಲಿದ್ದಾರೆ: ಅರವಿಂದ್ ಕೇಜ್ರಿವಾಲ್ ಬಾಂಬ್!
ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವ ಮನೀಶ್ ಸಿಸೊಡಿಯಾ ಅವರನ್ನು ಬಂಧಿಸಲು ಕೇಂದ್ರ ಸರಕಾರ ಸಂಚು ರೂಪಿಸಿದೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಬಾಂಬ್ ಹಾಕಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಮುಂದೆ ಮನೀಶ್ ಸಿಸೊಡಿಯಾ ಅವರನ್ನು ಬಂಧಿಸಲಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಬಂದ ನಂಬಲಾರ್ಹ ಮೂಲಗಳ ಪ್ರಕಾರ ಕೇಂದ್ರ ಸರಕಾರ ಎಲ್ಲಾ ತನಿಖಾ ಸಂಸ್ಥೆಗಳು ಮನೀಶ್ ಸಿಸೊಡಿಯಾ ಅವರನ್ನು ಬಂಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲು ಸೂಚಿಸಿದೆ ಎಂದರು.
ಒಬ್ಬೊಬ್ಬರನ್ನೇ ಬಂಧಿಸುವ ಬದಲು ಪಕ್ಷದ ಎಲ್ಲರನ್ನೂ ಒಮ್ಮೆಲೆ ಬಂಧಿಸಿ. ನಾವು ಆಮೇಲೆ ಹೊರಗೆ ಬಂದೇ ಬರುತ್ತೇವೆ. ನಮಗೆ ರಾಜಕೀಯ ಮಾಡಲು ಬರುವುದಿಲ್ಲ. ನಾವು ಕೆಲಸ ಮಾತ್ರ ಮಾಡುತ್ತೇವೆ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.