ಮೀರತ್: ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು ಡ್ರಮ್‌ನಲ್ಲಿ ಹೊತ್ತಿಟ್ಟು ಜೈಲು ಸೇರಿರುವ ಮುಸ್ಕಾನ್ ರಸ್ತೋಗಿ ಗರ್ಭಿಣಿ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
ಈ ಸಂಬಂದ ಮೃತನ ಸಹೋದರ ಸೌರಭ್ ರಜಪೂತ್ ಪ್ರತಿಕ್ರಿಯಿಸಿ, ಆ ಮಗು ತಮ್ಮ ಸಹೋದರ ಸೌರಭ್ ಅವರದ್ದಾಗಿದ್ದರೆ ಆ ಮಗುವನ್ನು ನಾವು ದತ್ತು ಪಡೆದು ಬೆಳೆಸುತ್ತೇವೆ ಎಂದರು.
ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಸೋಮವಾರ ಮುಸ್ಕಾನ್ ಅವರನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.
ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಮಾರ್ಚ್ 4 ರ ರಾತ್ರಿ ಮೀರತ್ ಜಿಲ್ಲೆಯ ಇಂದಿರಾನಗರದಲ್ಲಿರುವ ಅವರ ಮನೆಯಲ್ಲಿ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದರು.
ಸೌರಭ್‌ನ ಹತ್ಯೆ ಬಳಿಕ ಮುಸ್ಕಾನ್ ಮತ್ತು ಸಾಹಿಲ್ ದೇಹವನ್ನು ತುಂಡರಿಸಿ, ತಲೆ ಮತ್ತು ಕೈಗಳನ್ನು ಕತ್ತರಿಸಿ, ಸಿಮೆಂಟ್ ತುಂಬಿದ ನೀಲಿ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದರು. ತನಿಖೆಯಲ್ಲಿ ಮುಸ್ಕಾನ್ ನವೆಂಬರ್ 2023 ರಿಂದ ಕೊಲೆಗೆ ಯೋಜನೆ ರೂಪಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳಿಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಸ್ಕಾನ್ ಜೈಲಿನಲ್ಲಿ ಹೊಲಿಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಸಾಹಿಲ್ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಜೈಲು ಮೂಲಗಳು ತಿಳಿಸಿವೆ. ಮಾದಕ ವ್ಯಸನ ನಿರ್ಮೂಲನಾ ಕೇಂದ್ರದ ಸಹಾಯದಿಂದ ಇಬ್ಬರನ್ನೂ ಪುನರ್ವಸತಿ ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ.