Tahawwur Rana: ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಗ್ರ ತಹವ್ವೂರ್ ರಾಣಾ ಹೇಳಿದ್ದ ಮಾತು ತಿಳಿದರೆ ರಕ್ತ ಕುದಿಯುತ್ತದೆ

Krishnaveni K

ಶುಕ್ರವಾರ, 11 ಏಪ್ರಿಲ್ 2025 (17:10 IST)
ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಗ್ರ ತಹವ್ವೂರ್ ರಾಣಾ ತನ್ನ ಸಹಚರ ರಿಚರ್ಡ್ ಹ್ಯಾಡ್ಲೀಗೆ ಹೇಳಿದ್ದ ಮಾತು ಕೇಳಿದರೆ ನಿಮ್ಮ ರಕ್ತ ಕುದಿಯುತ್ತದೆ.

ಕೆನಡಾ ಪ್ರಜೆ, ಪಾಕಿಸ್ತಾನದ ಮಾಜಿ ಸೇನಾ ವೈದ್ಯ ರಾಣಾನನ್ನು ಅಮೆರಿಕಾ ಗಡೀಪಾರು ಮಾಡಿದ್ದು ಈಗ ಆತ ಭಾರತದ ಎನ್ಐಎ ವಶದಲ್ಲಿದ್ದಾನೆ. ನಿನ್ನೆ ಆತ ಅಮೆರಿಕಾದಿಂದ ಭಾರತಕ್ಕೆ ಬಂದಿಳಿದಿದ್ದಾನೆ. ತಕ್ಷಣವೇ ಆತನ ವಿಚಾರಣಾ ಪ್ರಕ್ರಿಯೆ ಶುರುವಾಗಿದೆ.

ಅಮೆರಿಕಾದ ಕಾನೂನು ವ್ಯವಹಾರಗಳ ವಿಭಾಗದ ಅಧಿಕಾರಿಯೊಬ್ಬರು ಹೇಳಿದ ಪ್ರಕಾರ ಆತ ಮುಂಬೈ ದಾಳಿ ಬಳಿಕ ತನ್ನ ಸಹಚರ ಹ್ಯಾಡ್ಲಿಗೆ ‘ಭಾರತೀಯರು ಈ ದಾಳಿಗೆ ಅರ್ಹರಾಗಿದ್ದರು. ಅವರಿಗೆ ಹಾಗೇ ಆಗಬೇಕಿತ್ತು’ ಎಂದಿದ್ದನಂತೆ. ಅಲ್ಲದೆ, ಈ ದಾಳಿ ವೇಳೆ ಹತ್ಯೆಗೀಡಾದ ಲಷ್ಕರ್ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಬೇಕು ಎಂದಿದ್ದನಂತೆ.

2008 ರಲ್ಲಿ ನಡೆದ ಮುಂಬೈ ಉಗ್ರ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು. ಭದ್ರತಾ ಸಿಬ್ಬಂದಿಗಳು 9 ಉಗ್ರರನ್ನು ಹೊಡೆದುರುಳಿಸಿದ್ದರು. ಈ ದಾಳಿಯ ಪ್ರಮುಖ ರೂವಾರಿಗಳೆಂದರೆ ಹ್ಯಾಡ್ಲಿ ಮತ್ತು ರಾಣಾ. ಇದೀಗ ರಾಣಾನನ್ನು ಭಾರತದ ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ