ಅಪ್ಪನ ಸೇವೆಗೆ ಸರ್ಕಾರಿ ವೈದ್ಯರನ್ನು ನೇಮಿಸಿದ್ದ ಲಾಲೂ ಪ್ರಸಾದ್ ಪುತ್ರ !
ಬುಧವಾರ, 14 ಜೂನ್ 2017 (09:46 IST)
ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಕುಟುಂಬ ಮತ್ತೆ ವಿವಾದಕ್ಕೀಡಾಗಿದೆ. ಅಪ್ಪನ ಸೇವೆಗೆ ಪುತ್ರ ಹಾಗೂ ಸಚಿವ ತೇಜ್ ಪ್ರತಾಪ್ ಸರ್ಕಾರಿ ವೈದ್ಯರನ್ನು ನೇಮಿಸಿ ವಿವಾದಕ್ಕೀಡಾಗಿದ್ದಾರೆ.
ಬಿಹಾರ ಆರೋಗ್ಯ ಸಚಿವರಾಗಿರುವ ತೇಜ್ ಪ್ರತಾಪ್ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಮತ್ತು ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಮೂವರು ಸರ್ಕಾರಿ ವೈದ್ಯರು ಮತ್ತು ಇಬ್ಬರು ದಾದಿಯರನ್ನು ನೇಮಿಸಿದ್ದರಂತೆ!
ಈ ತಂಡ ಲಾಲೂ ನಿವಾಸದಲ್ಲೇ 9 ದಿನಗಳ ಕಾಲ ಬೀಡುಬಿಟ್ಟಿತ್ತು. ಜ್ವರದಿಂದ ಬಳಲುತ್ತಿದ್ದ ತಂದೆಗೆ ಚಿಕಿತ್ಸೆ ಕೊಡಿಸಲು ಪುತ್ರ ಸರ್ಕಾರಿ ವೈದ್ಯರನ್ನು ನೇಮಿಸಿದ್ದು, ವ್ಯಾಪಕ ಟೀಕೆಗೊಳಗಾಗಿತ್ತು. ರಾಜ್ಯದಲ್ಲಿ ಸಾಮಾನ್ಯ ಜನರ ಆರೋಗ್ಯ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವಾಗ ವೈಯಕ್ತಿಕ ಕಾರಣಗಳಿಗೆ ಸರ್ಕಾರಿ ವೈದ್ಯರನ್ನು ನೇಮಿಸಿದ ಸಚಿವರ ನಡೆ ಎಷ್ಟು ಸರಿ ಎಂದು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.
ಆದರೆ ಆರ್ ಜೆಡಿ ಮಾತ್ರ ಇದೆಲ್ಲಾ ಮಾಧ್ಯಮಗಲ ಸೃಷ್ಟಿ. 24 ಗಂಟೆಯೂ ವೈದ್ಯರು ಲಾಲೂ ಬಳಿಯಿರಲಿಲ್ಲ. ದಿನಕ್ಕೆ ಎರಡು ಬಾರಿ ಮಾತ್ರ ಬಂದು ತಪಾಸಣೆ ನಡೆಸುತ್ತಿದ್ದರು ಎಂದು ಸಮಜಾಯಿಷಿ ನೀಡಿದೆ.