ರಾಮ ಮಂದಿರ ಕಟ್ಟಲು ಇಟ್ಟಿಗೆ ಸಮೇತ ಅಯೋಧ್ಯೆಗೆ ಬಂದ ಮುಸ್ಲಿಮರು!
ಶನಿವಾರ, 22 ಏಪ್ರಿಲ್ 2017 (11:41 IST)
ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ ಮುಸ್ಲಿಂ ಮತ್ತು ಹಿಂದೂ ಧರ್ಮೀಯರ ನಡುವೆ ಒಂದೆಡೆ ಚರ್ಚೆ ತಾರಕಕ್ಕೇರಿದ್ದರೆ, ಇನ್ನೊಂದೆಡೆ ಕೆಲವು ಮುಸ್ಲಿಂ ಕರ ಸೇವಕರು, ರಾಮ ಮಂದಿರ ಕಟ್ಟಲು ಇಟ್ಟಿಗೆ ಸಮೇತ ಸ್ಥಳಕ್ಕೆ ಆಗಮಿಸಿದ್ದಾರೆ!
ಮುಸ್ಲಿಂ ಕರ ಸೇವಕ್ ಮಂಚ್ ಸಂಘಟನೆಯ ಕಾರ್ಯಕರ್ತರು ರಾಮಜನ್ಮಭೂಮಿಯಲ್ಲಿ ಹಿಂದೂ ದೇವರಾದ ಶ್ರೀರಾಮ ಚಂದ್ರನ ದೇವಾಲಯ ಕಟ್ಟಲು ಲಾರಿ ತುಂಬಾ ಇಟ್ಟಿಗೆ ತುಂಬಿಕೊಂಡು ಬಂದಿದ್ದಾರೆ.
ಜೈ ಶ್ರೀರಾಮ್ ಎನ್ನುತ್ತಾ ಬಂದ ಮುಸ್ಲಿಮರ ನೋಡಿ ಅಲ್ಲಿದ್ದ ಸ್ಥಳೀಯರು ನಿಜಕ್ಕೂ ಮೂಕ ವಿಸ್ಮಿತರಾಗಿದ್ದರು. ಅಝಮ್ ಖಾನ್ ಎಂಬವರು ಈ ಸಂಘಟನೆಯ ನಾಯಕರು. ನಾವು ರಾಮ ಮಂದಿರ ಕಟ್ಟುವ ಉದ್ದೇಶದಿಂದ ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಬಂದಿದ್ದೇವೆಂದು ಅವರು ಹೇಳಿಕೊಂಡಿದ್ದಾರೆ.
ಆದರೆ ಸ್ಥಳೀಯಾಡಳಿತ ಅವರನ್ನು ಉದ್ದೇಶಿತ ಕಾರ್ಯ ಮಾಡಲು ಬಿಡಲಿಲ್ಲ. ಸ್ಥಳೀಯಾಡಳಿತ ಮನವೊಲಿಸಿದ ನಂತರ ಅವರು ರಾಮ ಮಂದಿರ ಕಟ್ಟುವ ನಿರ್ಧಾರದಿಂದ ಹಿಂದೆ ಸರಿದರಲ್ಲದೆ, ತಂದಿದ್ದ ಇಟ್ಟಿಗೆಗಳನ್ನು ಸುರಕ್ಷಿತವಾಗಿಡುವಂತೆ ಸ್ಥಳೀಯರಿಗೆ ಸೂಚಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ