ನವದೆಹಲಿ : ಲೋಕಸಭೆಯಲ್ಲಿ ನಿರೀಕ್ಷೆಯಂತೆ ಎಲ್ಲವೂ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿಲುವಳಿಗೆ ಸೋಲಾಗಿದೆ. ಎರಡನೇ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ.
ವಿಪಕ್ಷಗಳ ಗೈರಿನಲ್ಲಿ ಧ್ವನಿಮತದ ಮೂಲಕ ಅವಿಶ್ವಾಸ ನಿಲುವಳಿಯನ್ನು ಎನ್ಡಿಎ ಸರ್ಕಾರ ಸೋಲಿಸಿದೆ. ಈ ಸೋಲನ್ನು ವಿಪಕ್ಷಗಳ ಕೂಟ ಕೂಡ ನಿರೀಕ್ಷೆ ಮಾಡಿತ್ತು. ಏಕೆಂದರೆ, ವಿಪಕ್ಷಗಳ ಕೂಟದ ಬಳಿ ಅಗತ್ಯ ಸಂಖ್ಯಾ ಬಲವೇ ಇರಲಿಲ್ಲ. ಮೋದಿಯನ್ನು ಸಂಸತ್ಗೆ ಕರೆಯಿಸಿ ಮಣಿಪುರ ಹಿಂಸಾಚಾರದ ಬಗ್ಗೆ ಹೇಳಿಕೆ ಕೊಡಿಸಬೇಕೆಂಬ ಏಕೈಕ ಉದ್ದೇಶದಿಂದ ಐಎನ್ಡಿಐಎ ಕೂಟ ಈ ನಿಲುವಳಿಯನ್ನು ಮಂಡಿಸಿತ್ತು.
ಒಂದರ್ಥದಲ್ಲಿ ವಿಪಕ್ಷ ಕೂಟ ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ಸು ಸಾಧಿಸಿತು. ಕಾರಣ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು, ಮಣಿಪುರದ ಹಿಂಸಾಚಾರದ ಬಗ್ಗೆ ಸುದೀರ್ಘ ಹೇಳಿಕೆ ಕೊಟ್ಟರು.
ಅವಿಶ್ವಾಸ ನಿರ್ಣಯದ ಮೇಲೆ ಕಳೆದ ಮೂರು ದಿನಗಳಿಂದ ನಡೆದ ಚರ್ಚೆಯಲ್ಲಿ ಕೇಂದ್ರದ ವಿರುದ್ಧ ನಾನಾ ಆರೋಪ ಮಾಡಿದ್ದ ವಿಪಕ್ಷಗಳಿಗೆ ಲಘು ಧಾಟಿಯಲ್ಲಿಯೇ ಪ್ರಧಾನಿ ತಿರುಗೇಟು ನೀಡಿದರು.