ಕಾಶ್ಮೀರದ ಉರಿ ಪಟ್ಟಣದಲ್ಲಿ ನಡೆದ ದಾಳಿಯ ಹಿಂದೆ ಮಸೂದ್ ಅಜರ್ ನೇತೃತ್ವದ ಜೆಇಎಮ್ ಕೈವಾಡವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಈ ಹಿಂದಿನ ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 1999ರ ವಿಮಾನ್ ಹೈಜಾಕ್ ಸಂದರ್ಭದಲ್ಲಿ ಉಗ್ರ ಮಸೂದ್ ಅಜರ್ನನ್ನು ಬಿಡುಗಡೆ ಮಾಡುವ ಮೂಲಕ ಅಂದು ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿತ್ತು ಎಂದು ಅವರು ಆರೋಪಿಸಿದ್ದಾರೆ.
ಸರಣಿ ಟ್ವೀಟ್ ಪ್ರಕಟಿಸಿರುವ ಅವರು, ಮಸೂದ್ ಅಜರ್ನನ್ನು ಬಿಡುಗಡೆ ಮಾಡಿಸಲು ಉಗ್ರರು ಭಾರತೀಯ ವಿಮಾನವನ್ನು ಅಪಹರಿಸಿದ್ದರು. ಉಗ್ರರ ಒತ್ತಡಕ್ಕೆ ಮಣಿದಿದ್ದ ಸರ್ಕಾರ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡು ಆತನನ್ನು ಬಿಡುಗಡೆ ಮಾಡಿತ್ತು. ಇದೊಂದು ಪಾಠವಲ್ಲವೇ? ರಾಷ್ಟ್ರೀಯ ಭದ್ರತೆಯೊಂದಿಗೆ ಎಂದಿಗೂ ಕೂಡ ರಾಜಿ ಮಾಡಿಕೊಳ್ಳಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರತಿಪಾದಿಸಿದ್ದಾರೆ.
ಉರಿಯಲ್ಲಿ ನಡೆದಿರುವ ದಾಳಿಯನ್ನು ಖಂಡಿಸಿರುವ ಅವರು ಪಾಕಿಸ್ತಾನದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕಿದೆ ಎಂದು ಆಗ್ರಹಿಸಿದ್ದು, ಗಡಿ ಪ್ರದೇಶದಲ್ಲಿರುವ ಸೇನಾ ಕಚೇರಿಯನ್ನು ಕಾಪಾಡುವಲ್ಲಿ ಸೈನಿಕರು ವಿಫಲವಾಗುರುವದಕ್ಕೆ ಅವರು ಖೇದ ವ್ಯಕ್ತ ಪಡಿಸಿದ್ದಾರೆ.
1999 ರ ಡೆಸೆಂಬರ್ 24 ರಂದು ನೇಪಾಳದಿಂದ ದೆಹಲಿ ಕಡೆ ಬರುತ್ತಿದ್ದ ಭಾರತೀಯ ವಿಮಾನವನ್ನು ಉಗ್ರರು ಅಪಹರಿಸಿದ್ದರು. ಮಸೂದ್ ಅಜರ್ನನ್ನು ಬಿಡುಗಡೆ ಮಾಡದಿದ್ದರೆ ವಿಮಾನದಲ್ಲಿರುವ ಪ್ರಯಾಣಿಕರನ್ನು ಜೀವಂತ ಉಳಿಸುವುದಿಲ್ಲ ಎಂದು ಉಗ್ರರು ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಅಂದಿನ ಎನ್‌ಡಿಎ ಸರ್ಕಾರ ಮಸೂದ್ ಅಜರ್‌ನನ್ನು ಬಿಡುಗಡೆಗೊಳಿಸಿತ್ತು. ಅಂದು 176 ಜನರ ಪ್ರಾಣ ಉಳಿಸಿಕೊಳ್ಳಲು ದೇಶದ ಭದ್ರತೆಯೊಂದಿಗೆ ಸರ್ಕಾರ ರಾಜಿ ಮಾಡಿಕೊಂಡಿತ್ತು. ಅದರ ಫಲ ಇಂದು ಉಣ್ಣಬೇಕಿದೆ ಎಂದು ದಿಗ್ವಿಜಯ್ ಕಿಡಿಕಾರಿದ್ದಾರೆ.