ನವದೆಹಲಿ: ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಸ್ಥಗಿತಗೊಳಿಸಲು ಡೊನಾಲ್ಡ್ ಟ್ರಂಪ್ ಮುಂದೆ ಮೋದಿ ಶರಣಾದರು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ ಬಂದಿದೆ. ಸರೆಂಡರ್ ಆಗಿದ್ದು ನರೇಂದರ್ ಅಲ್ಲ ನೆಹರೂ ಎಂದಿದ್ದಾರೆ.
ರಾಹುಲ್ ಗಾಂಧಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ನರೇಂದರ್ ಸರೆಂಡರ್ ಎಂದು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಟ್ರಂಪ್ ಫೋನ್ ಬಂದ ತಕ್ಷಣ ಮೋದಿ ಆಪರೇಷನ್ ಸಿಂಧೂರ್ ಸ್ಥಗಿತಗೊಳಿಸಿದರು ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.
ಇದಕ್ಕೀಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಮೊಹಮ್ಮದ್ ಅಲಿ ಜಿನ್ನಾಗೆ ಶರಣಾಗಿ ಪಾಕಿಸ್ತಾನವನ್ನು ಅವರಿಗೆ ಒಪ್ಪಿಸಿ ಶರಣಾಗಿದ್ದು ನೆಹರೂ ಎಂದು ಕೆಲವರು ತಿರುಗೇಟು ನೀಡಿದ್ದಾರೆ.
ಚೀನಾಗೆ ಭಾರತದ ಭೂಭಾಗವನ್ನು ಒಪ್ಪಿಸಿ ಅವರಿಗೆ ಶರಣಾಗಿದ್ದು ನೆಹರೂ. ಪಾಕ್ ಆಕ್ರಮಿತ ಕಾಶ್ಮೀರವನ್ನು ಅವರಿಗೇ ಒಪ್ಪಿಸಿ ಶರಣಾಗಿದ್ದು ನೆಹರೂ ಎಂದು ಇತಿಹಾಸವನ್ನು ಕೆದಕಿ ಕೆಲವು ಬಿಜೆಪಿ ನಾಯಕರು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.