ನವದೆಹಲಿ: ಜೈಲಿನಲ್ಲಿರುವ ಕಾಶ್ಮೀರಿ ನಾಯಕ ಎಂಜಿನಿಯರ್ ರಶೀದ್ ಎಂದೇ ಗುರುತಿಸಿಕೊಂಡಿರುವ ಅಬ್ದುಲ್ ರಶೀದ್ ಶೇಖ್ ಅವರು ಬಾರಾಮುಲ್ಲಾದಿಂದ ಜುಲೈ 5 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಎನ್‌ಐಎ ಇಂದು ಸಮ್ಮತಿ ನೀಡಿದೆ.
ರಶೀದ್ ಅವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದು, ಅವರಿಗೆ 18 ನೇ ಲೋಕಸಭೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ.
ಭಯೋತ್ಪಾದನೆ ಹಣಕಾಸಿನ ನೆರವು ನೀಡಿದ ಆರೋಪದ ಹಿನ್ನೆಲೆ ರಶೀದ್ ಮೇಲೆ ಎನ್‌ಐಎ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವುದರಿಂದ 2019ರಿಂದ ಅವರು ಜೈಲಿನಲ್ಲಿದ್ದಾರೆ.
ಎನ್‌ಐಎ ಪ್ರಕರಣದಲ್ಲಿ ಬಂಧನದಲ್ಲಿದ್ದಾಗಲೇ ಅವರು ಬಾರಾಮುಲ್ಲಾದಿಂದ ಚುನಾವಣೆ ಗೆದ್ದಿದ್ದರು. ಲೋಕಸಭೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ರಶೀದ್ ಅವರು ಮಧ್ಯಂತರ ಜಾಮೀನು ಅಥವಾ ಕಸ್ಟಡಿ ಪೆರೋಲ್ ಕೋರಿದ್ದರು. ಪಟಿಯಾಲ ಹೌಸ್ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ರಶೀದ್ ಅವರ ಜಾಮೀನು ಅರ್ಜಿಯ ಕುರಿತು ನಾಳೆ ಆದೇಶ ಹೊರಡಿಸಲಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿರುವ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ಬಂಧನದಲ್ಲಿರುವ ಇವರು ಸಾರ್ವತ್ರಿಕ ಚುನಾವಣೆಯಲ್ಲಿ ಬಾರಾಮುಲ್ಲಾದಿಂದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದರು.