ನವದೆಹಲಿ: ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ನೀಡಿದ ಹಣಕಾಸಿನ ಮೊತ್ತದ ವಿವರ ನೀಡಿದ್ದಾರೆ.
ರಾಜ್ಯಕ್ಕೆ ಇಲ್ಲಿಯವರೆಗೆ 12,476 ಕೋಟಿ ರೂ. ಗಳ ಬಾಬ್ತು ಬರ ಪರಿಹಾರವೂ ಸೇರಿದಂತೆ ಪ್ರಕೃತಿ ವಿಕೋಪದಡಿ 6,196 ಕೋಟಿ ರೂ. ನೀಡಲಾಗಿದೆ. ತೆರಿಗೆ ಕಟ್ಟುವ ಕರ್ನಾಟಕ ಜನಕ್ಕೆ ಯಾವುದೇ ಅಸಮಾಧಾನವಿಲ್ಲ. ಆದರೆ ಕಾಂಗ್ರೆಸ್ ತನ್ನ ಸ್ವಹಿತಾಸಕ್ತಿಗಾಗಿ ಇದನ್ನು ದೊಡ್ಡ ವಿವಾದ ಮಾಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ.
ನಿರ್ಮಲಾ ಕೊಟ್ಟ ಲೆಕ್ಕದ ವಿವರ
14 ನೇ ಆಯೋಗದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕವು 1,51,309 ಕೋಟಿ ರೂ. ತೆರಿಗೆ ಹಂಚಿಕೆ ಪಡೆದಿದೆ. ಪ್ರಸ್ತುತ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಮೊದಲ ನಾಲ್ಕು ವರ್ಷಗಳಲ್ಲಿ ಕರ್ನಾಟಕವು ಈಗಾಗಲೇ 1,29,854 ಕೋಟಿ ರೂ. ಕೊಡುಗೆ ಪಡೆದಿದೆ. ಭಾರತ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ 44,485 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಇದರಿಂದಾಗಿ ಹಣಕಾಸು ವರ್ಷ 2024-25 ರ ಅವದಿಯಲ್ಲಿ ಕರ್ನಾಟಕ ಒಟ್ಟು 1,74,339 ಕೋಟಿ ರೂ. ಪಡೆದಂತಾಗಲಿದೆ.
14 ನೇ ಹಣಕಾಸು ಆಯೋಗಕ್ಕಿಂತ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ಹಣ ಸಂದಾಯವಾಗಿದೆ. 15 ನೇ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ದಕ್ಷಿಣದ ಮತ್ತೊಂದು ರಾಜ್ಯ ಕೇರಳವು ಕೂಡಾ ಆದಾಯ ಕೊರತೆಯ ಅನುದಾನವನ್ನು ಪಡೆದುಕೊಂಡಿದೆ.
ಬಡ್ಡಿ ರಹಿತ ಸಾಲ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ನೆರವು
50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಕಲ್ಪಿಸುವ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದೆ. ಅದರಂತೆ ಕರ್ನಾಟಕಕ್ಕೆ ಭಾರತ ಸರ್ಕಾರವು 6,280 ಕೋಟಿ ರೂ. ಸಾಲ ನೀಡಿದೆ. ವಿಪತ್ತು ನಿರ್ವಹಣೆಗಾಗಿ ಕೇಂದ್ರದಿಂದ ಕರ್ನಾಟಕರು 6,196 ಕೋಟಿ ರೂ. ಅನುದಾನ ಪಡೆದಿದೆ.
ಕರ್ನಾಟಕ ಸರ್ಕಾರವು ಇದುವರೆಗೆ ಕೇಂದ್ರದಿಂದ ಒಂದು ರೂಪಾಯಿಯೂ ಬಂದಿಲ್ಲ ಎಂದು ಸುಳ್ಳು ಜಾಹೀರಾತು ನೀಡಿದೆ. ವಿಶೇಷ ಅನುದಾನವನ್ನು ನೀಡಲು ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ. ಅದಾದ್ಯೂ ಈ ರೀತಿ ಸುಳ್ಳು ಜಾಹೀರಾತು ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.