ಎಟಿಎಂ ವಿತ್‌ಡ್ರಾ ಮಿತಿ ಹಿಂಪಡೆದ ಆರ್‌ಬಿಐ

ಮಂಗಳವಾರ, 31 ಜನವರಿ 2017 (08:28 IST)
ಎಟಿಎಂ ಮತ್ತು ಬ್ಯಾಂಕ್‌ಗಳಲ್ಲಿ ಹಣ ವಿತ್‌ಡ್ರಾ ಮೇಲೆ ಹೇರಿದ್ದ ಮಿತಿಯನ್ನು ಆರ್‌ಬಿಐ ಹಿಂತೆಗೆದುಕೊಂಡಿದ್ದು, ಫೆಬ್ರವರಿ 1 ರಿಂದ ಇದು ಜಾರಿಯಲ್ಲಿ ಬರಲಿದೆ. ಆದರೆ ವಾರದ ಮಿತಿಯಲ್ಲಿ (24,000) ಮಾತ್ರ ಬದಲಾವಣೆಯಾಗಿಲ್ಲ. ಹಾಗಾಗಿ ಉಳಿತಾಯ ಖಾತೆದಾರರು ಎಂಟಿಎಂನಿಂದ ವಾರಕ್ಕೆ ಗರಿಷ್ಠ 24,000ರೂಪಾಯಿಯನ್ನು ಮಾತ್ರ ಪಡೆಯಲು ಸಾಧ್ಯ. 
 
ಚಾಲ್ತಿ ಖಾತೆ, ಓವರ್‌ಡ್ರಾಫ್ಟ್‌ ಖಾತೆ, ತುರ್ತು ಸಾಲ ಖಾತೆಯಿಂದ ಹಣ ಪಡೆಯುವ ಮಿತಿಯನ್ನು ರದ್ದುಗೊಳಿಸಲಾಗಿದೆ. ಆದರೆ ನವೆಂಬರ್ 8 ಕ್ಕಿಂತ ಮೊದಲಿದ್ದಂತೆ ತಮ್ಮ ಎಟಿಎಂಗಳಿಂದ ಗ್ರಾಹಕರು ತೆಗೆಯಬಹುದಾದ ಹಣಕ್ಕೆ ಮಿತಿ ನಿಗದಿ ಪಡಿಸುವ ಸ್ವಾತಂತ್ರ್ಯವನ್ನು ಬ್ಯಾಂಕ್‌ಗಳಿಗೆ ನೀಡಿದೆ. 
 
ಹೊಸ ನೋಟುಗಳ ಮರುಪೂರೈಕೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ವಾರದ ಮಿತಿಯಲ್ಲಿ ಪರಿಷ್ಕರಣೆ ತರುವ ಭರವಸೆಯನ್ನು ಆರ್‌ಬಿಐ ನೀಡಿದೆ.
 
ನವೆಂಬರ್ 8 ರಂದು ಪ್ರಧಾನಿ ಮೋದಿ ಹಳೆಯ 500 ಮತ್ತು 1,000ರೂಪಾಯಿ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಬಳಿಕ ನೋಟುಗಳ ಕೊರತೆ ಉಂಟಾಗಿದ್ದರಿಂದ ಎಟಿಎಂ ಮತ್ತು ಬ್ಯಾಂಕ್‌ಗಳಿಂದ ಹಣ ಪಡೆಯುವುದಕ್ಕೆ ಆರ್‌ಬಿಐ ಮಿತಿ ಹೇರಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ