ನವದೆಹಲಿ : ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಕ್ರಮ ಕೈಗೊಂಡಿದೆ.
ವಾರ್ಷಿಕ 20 ಲಕ್ಷ ಟನ್ ಸೋಯಾಬೀನ್ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಸಂಪೂರ್ಣ ತೆಗೆದು ಹಾಕುವುದಾಗಿ ಮಂಗಳವಾರ ರಾತ್ರಿ ಘೋಷಿಸಿದೆ
ಈ ನಿರ್ಣಯದಿಂದಾಗಿ ಈಗಾಗಲೇ ಕೇಜಿಗೆ 200 ರು. ಮೀರಿ ಗ್ರಾಹಕರ ತಲೆಬಿಸಿಗೆ ಕಾರಣವಾಗಿರುವ ಖಾದ್ಯ ತೈಲ ಬೆಲೆ ಇಳಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಈ ನಿರ್ಣಯ ಮುಂದಿನ 2 ಹಣಕಾಸು ವರ್ಷಗಳಾದ 2022-23 ಮತ್ತು 2023-24ಕ್ಕೆ ಅನ್ವಯವಾಗಲಿದೆ. ಇದರಿಂದಾಗಿ ಒಟ್ಟಾರೆ 2024ರ ಮಾಚ್ರ್ 31ರವರೆಗೆ 80 ಲಕ್ಷ ಟನ್ ಖಾದ್ಯ ತೈಲ ಆಮದು ಸುಂಕ ರಹಿತವಾಗಿ ಭಾರತ ಪ್ರವೇಶಿಸಲಿದೆ ಎಂದು ಹೇಳಬಹುದಾಗಿದೆ.
ಇದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೊಂಚ ಮಟ್ಟದ ನೆಮ್ಮದಿ ನೀಡಲಿದೆ. ಸೋಯಾ ಬೀನ್ ಎಣ್ಣೆಯ ಬೆಲೆ ಲೀಟರ್ಗೆ ಸುಮಾರು 3 ರು. ಕಡಿಮೆಯಾಗಲಿದೆ ಎಂದು ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ ಆಫ್ ಇಂಡಿಯಾದ ನಿರ್ದೇಶಕ ಬಿ.ವಿ.ಮೆಹ್ತಾ ಹೇಳಿದ್ದಾರೆ.