ಇನ್ಮುಂದೆ ಎನ್ಆರ್ಐಗಳಿಗೆ ಯಾವುದೇ ನಿರ್ಬಂಧ ಇಲ್ಲ!

ಸೋಮವಾರ, 4 ಜುಲೈ 2022 (12:46 IST)
ನವದೆಹಲಿ : ಇನ್ಮುಂದೆ ನಿರ್ಬಂಧ ಇಲ್ಲದೇ  ಅನಿವಾಸಿ ಭಾರತೀಯರು(ಎನ್ಆರ್ಐ) ವಾರ್ಷಿಕವಾಗಿ 10 ಲಕ್ಷ ರೂ. ಕಳುಹಿಸಬಹುದು.
 
ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ ಕೆಲವು ನಿಯಮಗಳಿಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿಗಳನ್ನು ಮಾಡಿದೆ. ದೇಣಿಗೆ ಮೊತ್ತ ಹೆಚ್ಚಳ ಮತ್ತು ಸ್ವೀಕಾರದ ಮಾಹಿತಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಲಾಗಿದೆ.

ಈ ತಿದ್ದುಪಡಿಯಿಂದ ಸಂಬಂಧಿಕರಿಂದ ವಿದೇಶಿ ದೇಣಿಗೆ ಪಡೆಯುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

ಕೇಂದ್ರ ಗೃಹ ಸಚಿವಾಲಯ ಶುಕ್ರವಾರವೇ ಗೆಜೆಟ್ ಅಧಿಸೂಚನೆ ಪ್ರಕಟಿಸಿ 2022ರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದೆ. 2011ರ ವಿದೇಶಿ ದೇಣಿಗೆ ನಿಯಂತ್ರಣ ನಿಯಮಗಳ ಪ್ರಕಾರ ‘1 ಲಕ್ಷ ರೂಪಾಯಿ‘ ಪದವನ್ನು ‘10 ಲಕ್ಷ ರೂಪಾಯಿ‘ ಮತ್ತು ‘30 ದಿನಗಳು’ ಪದವನ್ನು ‘3 ತಿಂಗಳು‘ ಎಂದು ತಿದ್ದುಪಡಿ ಮಾಡಲಾಗಿದೆ.

ಈ ಮೊದಲು ಹಣಕಾಸು ವರ್ಷವೊಂದರಲ್ಲಿ ಯಾವುದೇ ವ್ಯಕ್ತಿಯು 1 ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದಲ್ಲಿ ದೇಣಿಗೆ ಪಡೆದ ದಿನದಿಂದ 30 ದಿನದ ಒಳಗೆ ಕೇಂದ್ರ ಸರಕಾರಕ್ಕೆ ಪೂರ್ಣ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು.

ತಿದ್ದುಪಡಿಯಾದ ಬಳಿಕ ವಿದೇಶದಲ್ಲಿರುವ ಸಂಬಂಧಿಕರು ತಮ್ಮ ಕುಟುಂಬಸ್ಥರು ಅಥವಾ ಬೇರೆಯವರಿಗೆ ಕೇಂದ್ರದ ಗಮನಕ್ಕೆ ತರದೇ ಗರಿಷ್ಟ 10 ಲಕ್ಷ ರೂ.ವರೆಗೆ ದೇಣಿಗೆ ಕಳುಹಿಸಲು ಅನುಮತಿ ನೀಡಲಾಗಿದೆ. 10 ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ ಕಳಹಿಸಿದ್ದಲ್ಲಿ ದೇಣಿಗೆ ಸ್ವೀಕಾರದ ದಿನಾಂಕದಿಂದ 30 ದಿನಗಳ ಬದಲಿಗೆ 3 ತಿಂಗಳೊಳಗಾಗಿ ಕೇಂದ್ರಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ