ನವದೆಹಲಿ : ಉಕ್ರೇನ್ ಮೇಲೆ ರಷ್ಯಾ ದೇಶದ ಆಕ್ರಮಣದ ಕಾರಣದಿಂದಾಗಿ ರಷ್ಯಾದ ತೈಲದ ಮೇಲೆ ಯುರೋಪ್ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ವಿಧಿಸಿದೆ.
ಇದರ ಪರಿಣಾಮದಿಂದಾಗಿ ಯುರೋಪ್ ಅನ್ನು ಹಿಂದಿಕ್ಕಿ, ರಷ್ಯಾದ ಅತೀದೊಡ್ಡ ತೈಲ ಖರೀದಿದಾರ ಎನ್ನುವ ಸ್ಥಾನವನ್ನು ಕಳೆದ ತಿಂಗಳು ಏಷ್ಯಾ ಸಂಪಾದನೆ ಮಾಡಿದೆ. ಈ ಅಂತರವು ಮೇ ತಿಂಗಳಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಡೇಟಾ ಮತ್ತು ಅನಾಲಿಟಿಕ್ಸ್ ಕಂಪನಿಯಾದ ಕೆಪ್ಲರ್ ಪ್ರಕಾರ, 79 ಮಿಲಿಯನ್ ಬ್ಯಾರೆಲ್ಗಳು ಕಳೆದ ವಾರದಲ್ಲಿ ಸಾಗಣೆ ಮತ್ತು ಸಮುದ್ರದಲ್ಲಿ ತೇಲುವ ಸಂಗ್ರಹಣೆಯಲ್ಲಿವೆ, ಉಕ್ರೇನ್ ದೇಶದ ಮೇಲೆ ಫೆಬ್ರವರಿಯಲ್ಲಿ ಆಕ್ರಮಣ ಮಾಡುವ ಮೊದಲು 27 ಮಿಲಿಯನ್ ಬ್ಯಾರೆಲ್ಗಳಿಗಿಂತ ಎರಡು ಪಟ್ಟು ಹೆಚ್ಚ ಇದಾಗಿದೆ. ಏಷ್ಯಾದೆಡೆಗೆ ಬರುತ್ತಿರುವ ಬಹುತೇಕ ತೈಲವು ಭಾರತ ಹಾಗೂ ಚೀನಾಕ್ಕೆ ತಲುಪಲಿದೆ ಎನ್ನುವುದು ವಿಶೇಷ.
ಸಮುದ್ರದ ಮೂಲಕ ತೈಲ ಸಾಗಾಣೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗುತ್ತಿರುವುದು, ರಷ್ಯಾದ ಆಕ್ರಮಣದಿಂದಾಗಿ ಜಾಗತಿಕ ಇಂಧನ ವ್ಯಾಪಾರವು ಯಾವ ಮಟ್ಟದಲ್ಲಿ ಪ್ರಕ್ಷುಬ್ಧತೆಗೆ ಒಳಗಾಗಿದೆ ಎನ್ನುವುದು ಎತ್ತಿ ತೋರಿಸಿದೆ. ರಷ್ಯಾದ ತೈಲದ ಪ್ರಮುಖ ಬಳಕೆದಾರರಾಗಿದ್ದ, ಪೈಪ್ ಲೈನ್ ಮೂಲಕ ರಷ್ಯಾದ ತೈಲವನ್ನು ಬಳಕೆ ಮಾಡುತ್ತಿದ್ದ ಯುರೋಪ್, ಇಂಗ್ಲೆಂಡ್ ಮತ್ತು ಅಮೆರಿಕ ಮಾಸ್ಕೋ ಮೇಲೆ ನಿರ್ಬಂಧ ವಿಧಿಸಿದೆ.
ಇದರಿಂದಾಗಿ ಮಾಸ್ಕೋ ಹೊಸ ಖರೀದಿದಾರರನ್ನು ಹುಡುಕುವ ಪ್ರಯತ್ನ ಮಾಡಿತ್ತು. ಅದರಂತೆ, ತೈಲಕ್ಕಾಗಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದ ಭಾರತ ಹಾಗೂ ಚೀನಾ, ರಷ್ಯಾದಿಂದ ಭಾರಿ ರಿಯಾಯಿತಿಯಲ್ಲಿ ಇಂಧನವನ್ನು ಖರೀದಿ ಮಾಡಿದ್ದು, ಲಕ್ಷಾಂತರ ಬ್ಯಾರಲ್ ಗಳ ತೈಲವನ್ನು ಸಾಗಾಣೆ ಮಾಡಿಕೊಳ್ಳುತ್ತಿವೆ.
"ಏಷ್ಯಾದಲ್ಲಿನ ಕೆಲವು ಆಸಕ್ತ ಖರೀದಿದಾರರು ರಾಜಕೀಯ ನಿಲುವನ್ನು ತೆಗೆದುಕೊಳ್ಳುವ ಬದಲು ದೇಶದ ಆರ್ಥಿಕತೆಯ ಕಾರಣಕ್ಕಾಗಿ ಹೆಚ್ಚು ಪ್ರೇರಿತರಾಗಿದ್ದಾರೆ" ಎಂದು ಸಿಂಗಾಪುರದ ಕೆಪ್ಲರ್ ನಲ್ಲಿ ಹಿರಿಯ ತೈಲ ವಿಶ್ಲೇಷಕ ಜೇನ್ ಕ್ಸಿ ಹೇಳಿದ್ದಾರೆ.