ನಿರ್ದಿಷ್ಟವಾಗಿ ಪೆಗಾಸಸ್ ಎನ್ನಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್
ಗುರುವಾರ, 25 ಆಗಸ್ಟ್ 2022 (14:03 IST)
ನವದೆಹಲಿ : ಪೆಗಾಸಸ್ ಸ್ಪೈವೇರ್ ಬಳಸಿ ದೇಶದ ಪ್ರಮುಖ ವ್ಯಕ್ತಿಗಳ ಮೇಲೆ ಅಕ್ರಮ ಕಣ್ಗಾವಲು ವಹಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ತಜ್ಞರ ಸಮಿತಿ ವರದಿ ಸಲ್ಲಿಕೆ ಮಾಡಿದೆ.
ಮೂರು ಭಾಗಗಳಲ್ಲಿ ವರದಿ ಸಲ್ಲಿಕೆಯಾಗಿದ್ದು, ತಾಂತ್ರಿಕ ಸಮಿತಿಯಿಂದ ಎರಡು ವರದಿಗಳು ಮತ್ತು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಆರ್.ವಿ ರವೀಂದ್ರನ್ ಮೇಲ್ವಿಚಾರಣಾ ಸಮಿತಿಯಿಂದ ಒಂದು ವರದಿಯನ್ನು ಸಲ್ಲಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠಕ್ಕೆ ಸಮಿತಿಯೂ ವರದಿ ಸಲ್ಲಿಸಿತ್ತು.
ವರದಿ ಸಲ್ಲಿಕೆ ವೇಳೆ ಭಾರತ ಸರ್ಕಾರವು ಸಮಿತಿಯೊಂದಿಗೆ ಸಹಕರಿಸಲಿಲ್ಲ ಎಂದು ಟೀಕಿಸಿತು. ಅಲ್ಲದೇ ತಮ್ಮ ಫೋನ್ಗಳನ್ನು ಸಲ್ಲಿಸಿದ ಸದಸ್ಯರು ವರದಿಯನ್ನು ಬಿಡುಗಡೆ ಮಾಡದಂತೆ ಹಾಗೂ ವರದಿಯನ್ನು ಗೌಪ್ಯವಾಗಿಡುವಂತೆ ವಿನಂತಿಸಿದ್ದರು.
ವರದಿಗಳ ಪ್ರಕಾರ, ತಾಂತ್ರಿಕ ಸಮಿತಿಯೂ 29 ಫೋನ್ಗಳನ್ನು ಪರಿಶೀಲಿಸಿದೆ, 29ರ ಪೈಕಿ 5 ಫೋನ್ಗಳಲ್ಲಿ ಕೆಲವು ಮಾಲ್ವೇರ್ಗಳನ್ನು ಹೊಂದಿರುವುದು ಕಂಡುಕೊಂಡಿದೆ. ಆದರೆ ಇದಕ್ಕೆ ಪೆಗಾಸಸ್ ನೇರ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.